ಹುಬ್ಬಳ್ಳಿ:ಕಿಮ್ಸ್ ಆಸ್ಪತ್ರೆ ಉತ್ತರ ಕರ್ನಾಟಕದ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಿತ್ಯ ಹತ್ತಕ್ಕೂ ಹೆಚ್ಚು ಜಿಲ್ಲೆಗಳ ಸಾವಿರಾರು ರೋಗಿಗಳು ಇಲ್ಲಿಗೆ ಬರುತ್ತಾರೆ. ಹೀಗೆ ಬರುವ ರೋಗಿಗಳು ಗಂಟೆಗಟ್ಟಲೆ ಕಾಯಲೇ ಬೇಕಾಗುತ್ತಿತ್ತು. ಆದರೆ ಇದೀಗ ಎಕ್ಸರೇ, ಸ್ಕ್ಯಾನಿಂಗ್ ಹಾಗೂ ರಕ್ತ ತಪಾಸಣೆ ರಿಪೋರ್ಟ್ ಅನ್ನು ಆನ್‌ಲೈನ್‌ನಲ್ಲೇ ನೀಡುವ ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿರುವ ವಿಚಾರವು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಂಡ ಕಿಮ್ಸ್:ಕರ್ನಾಟಕ ವಿಜ್ಞಾನ ಮತ್ತು ವೈದ್ಯಕೀಯ ಸಂಸ್ಥೆ (ಕಿಮ್ಸ್) ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುತ್ತಿದ್ದು, ರೋಗಿಗಳು ಮತ್ತು ವೈದ್ಯರಿಗೆ ಇನ್ನಷ್ಟು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎಕ್ಸರೇ , ಸ್ಕ್ಯಾನಿಂಗ್ ಹಾಗೂ ರಕ್ತ ತಪಾಸಣೆ ರಿಪೋರ್ಟ್ ಅನ್ನು ಆನ್‌ಲೈನ್‌ನಲ್ಲೇ ನೀಡಲು ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಮಾದರಿಯಾಗಿದೆ.
ಕಿಮ್ಸ್‌ನಲ್ಲಿ ಎಲುಬು, ಕೀಲು, ಗರ್ಭಿಣಿಯರು, ಕ್ಯಾನ್ಸರ್ ಸೇರಿದಂತೆ ನಾನಾ ಕಾಯಿಲೆಗಳ ಕೂಲಂಕಷವಾಗಿ ಪರೀಕ್ಷೆಗಾಗಿ ಎಕ್ಸರೇ, ಡಾಪ್ಲರ್, ಯುಎಸ್‌ಜಿ, ಸಿಟಿ, ಎಂಆರ್‌ಐ ಸ್ಕ್ಯಾನಿಂಗ್‌ಗಳ ವರದಿ ಹಾಗೂ ರಕ್ತ ತಪಾಸಣೆ ವರದಿಗಳನ್ನು ಪಡೆಯಲು ರೋಗಿಗಳು ಎಕ್ಸರೇ ಮತ್ತು ಲ್ಯಾಬ್ ವಿಭಾಗಕ್ಕೆ ಅನೇಕರು ಎಡತಾಕಬೇಕಿತ್ತು.
ಬಹುತೇಕ ವರದಿಗಳು ಆನ್ಲೈನ್ನಲ್ಲಿ ಲಭ್ಯ: ಆದರೆ, ಇದೀಗ ಎಲ್ಲವೂ ಸಂಬಂಧಿಸಿದ ವಿಭಾಗದ ವೈದ್ಯರಿಗೆ ಆನ್‌ಲೈನ್ ಮೂಲಕವೇ ದೊರೆಯುವ ವ್ಯವಸ್ಥೆ ಮಾಡಿದೆ. ಈ ವ್ಯವಸ್ಥೆ ಕಳೆದ ಕೆಲ ತಿಂಗಳಿನಿಂದ ಆರಂಭವಾಗಿದ್ದು, ಇದು ರೋಗಿಗಳಿಗೆ ಅನುಕೂಲವಾಗಿದೆ. ನಿತ್ಯ ಸರಾಸರಿ 700ರಿಂದ 900 ಜನರು ಸ್ಕ್ಯಾನಿಂಗ್, ಎಕ್ಸರೇ ಪರೀಕ್ಷೆಗೆ ಒಳಪಡುತ್ತಾರೆ. ಆದಾದ ಬಳಿಕ ರೋಗಿಗಳು ಅವುಗಳ ವರದಿಗಳಿಗಾಗಿ ಮಧ್ಯಾಹ್ನ, ಸಂಜೆ ವೇಳೆಗೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡಬೇಕಾಗುತ್ತಿತ್ತು. ಆನ್‌ಲೈನ್ ವ್ಯವಸ್ಥೆ ಜಾರಿಯಿಂದ ಈ ಅಲೆದಾಟ ತಪ್ಪಿದೆ. ಇದೇ ಮೊದಲ ಬಾರಿಗೆ ಕಿಮ್ಸ್‌ನಲ್ಲಿ ರಕ್ತ ತಪಾಸಣೆ ವರದಿಯನ್ನೂ ಸಹ ಆನ್ಲೈನ್ನಲ್ಲಿ ಲಭಿಸುವಂತೆ ಮಾಡಿದೆ ಎಂದು ಹೇಳುತ್ತಾರೆ ಸಾರ್ವಜನಿಕರು.