ಹುಬ್ಬಳ್ಳಿ:ಬೇಸಿಗೆಹಿನ್ನೆಲೆಯಲ್ಲಿ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ಬೇಸಿಗೆ ರಜೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಮೂಲಕ ಶಿಕ್ಷಣ ಸಚಿವರಿಗೆ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಬಸವರಾಜ ಹೊರಟ್ಟಿ ಅವರ ಮನೆಗೆ ಭೇಟಿ ನೀಡಿ ಮನವಿ ಸಲ್ಲಿಸಿದ ಶಿಕ್ಷಕರು, ಈಗಾಗಲೇ ಶಿಕ್ಷಣ ಸಚಿವ ಸುರೇಶ ಕುಮಾರ್ ಅವರು ಬೆಂಗಳೂರಿನ ಶಾಲೆಗಳಿಗೆ 1ರಿಂದ 9ನೇ ತರಗತಿಗೆ ರಜೆ ಘೋಷಣೆ ಮಾಡಿರುವಂತೆ ಉತ್ತರ ಕರ್ನಾಟಕದಲ್ಲಿಯೂ ಕೂಡ ಪರೀಕ್ಷೆ ಮುಗಿಯುತ್ತಿದ್ದಂತೆ ಬೇಸಿಗೆ ರಜೆ ಘೋಷಣೆ ಮಾಡುವಂತೆ ಸಭಾಪತಿಗಳು ಶಿಕ್ಷಣ ಸಚಿವರಿಗೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.
ಬಳಿಕ ಮಾತನಾಡಿದ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ಈಗಾಗಲೇ ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ತಾಪಮಾನ ಹೆಚ್ಚಾಗಿದೆ. ಅಲ್ಲದೇ ಕೋವಿಡ್ ಭೀತಿ ಕೂಡ ಹೆಚ್ಚಾಗಿದೆ. ಈ ಹಿನ್ನೆಲೆ ಬೆಂಗಳೂರಿನ ಮಾದರಿಯಲ್ಲಿ ಇಲ್ಲಿನ ಶಾಲೆಗಳಿಗೂ ಕೂಡ ರಜೆ ನೀಡಬೇಕು ಎಂದರು.
ಸುಮಾರು ಐದು ವರ್ಷದಿಂದ ಕೇವಲ ಒಂದು ಬಾರಿ ಮಾತ್ರ ವರ್ಗಾವಣೆಯಾಗಿದೆ. ಅದನ್ನು ಹೊರತು ಪಡಿಸಿ ಇದುವರೆಗೂ ಯಾವುದೇ ಶಿಕ್ಷಕರ ವರ್ಗಾವಣೆ ಕೂಡ ಆಗಿಲ್ಲ. ಆದ್ದರಿಂದ ಈ ಬಗ್ಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಗಮನಕ್ಕೆ ತಂದಿದ್ದೇವೆ. ಅವರು ಕೂಡ ಈ ಬಗ್ಗೆ ಶೀಘ್ರವಾಗಿ ಸಮಾಲೋಚನೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೆತ್ತಿಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಅಶೋಕ ಸಜ್ಜನ ಹೇಳಿದರು.
ಇದನ್ನೂ ಓದಿ:ಭಾರತದ ಗಡಿ ಪ್ರವೇಶಿಸಿದ ಪಾಕ್ ಬಾಲಕ: ಆಹಾರ ನೀಡಿ ಮಾನವೀಯತೆ ಮೆರೆದ ಸೈನಿಕರು