ಹುಬ್ಬಳ್ಳಿ:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿರುವ 'ಕ್ಷಯ ಮುಕ್ತ ಭಾರತ ಅಭಿಯಾನ'ಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕೈಜೋಡಿಸಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 10 ಕ್ಷಯ ರೋಗಿಗಳನ್ನು ದತ್ತು ಪಡೆದಿರುವ ಕೇಂದ್ರ ಸಚಿವರು ಕ್ಷಯ ರೋಗ ಮುಕ್ತ ಭಾರತ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.
ಭಾರತದಲ್ಲಿ ಪ್ರತಿ ವರ್ಷ ಅಂದಾಜು 26 ಲಕ್ಷ ಕ್ಷಯ ರೋಗದ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಸುಮಾರು 4.45 ಲಕ್ಷ ಜನ ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಇಂದಿಗೂ ಭಾರತದಲ್ಲಿ ಕ್ಷಯರೋಗ ನಿರ್ಮೂಲನೆ ಸವಾಲಾಗಿ ಪರಿಣಮಿಸಿದೆ.
2025 ರ ವೇಳೆಗೆ ಭಾರತವನ್ನು ಕ್ಷಯರೋಗ ಮುಕ್ತವನ್ನಾಗಿಸಲು ಕೇಂದ್ರ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿದೆ. ಟಿಬಿ ಮುಕ್ತ ಭಾರತ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಕ್ಷಯ ರೋಗದ ವಿರುದ್ಧದ ಹೋರಾಟವನ್ನು ಜನಾಂದೋಲನ ಮಾದರಿಯಲ್ಲಿ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಅಭಿಯಾನ ಬೆಂಬಲಿಸಿ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅಭಿಯಾನದಲ್ಲಿ ಎಲ್ಲರೂ ಭಾಗಿಯಾಗಿ ಕ್ಷಯರೋಗದ ಕುರಿತು ಜಾಗೃತರಾಗಲು ಮನವಿ ಮಾಡಿದ್ದಾರೆ. ಮಹತ್ವದ ಅಭಿಯಾನಕ್ಕಾಗಿ ಕೇಂದ್ರ ಅರೋಗ್ಯ ಸಚಿವಾಲಯ Ni-kshay 2.0 Platformಆರಂಭಿಸಿದ್ದು, http://communitysupport.nikshay.in ವೆಬ್ಸೈಟ್ಗೆ ಭೇಟಿ ನೀಡಿ ನೋಂದಾಯಿಸಿಕೊಂಡು ನೀವು "ನಿಕ್ಷಯ ಮಿತ್ರರಾಗಿ.. ಬನ್ನಿ ಭಾರತವನ್ನು ಕ್ಷಯ ಮುಕ್ತಗೊಳಿಸೋಣ" ಎಂದು ತಮ್ಮ ಟ್ವಿಟರ್ ನಲ್ಲಿ ಕರೆ ನೀಡಿದ್ದಾರೆ.
ಇದನ್ನೂ ಓದಿ:ಹೊಸ ಟಿಬಿ ಲಸಿಕೆಗಾಗಿ ಬಯೋಫ್ಯಾಬ್ರಿ ಜೊತೆ ಕೈ ಜೋಡಿಸಿದ ಭಾರತ್ ಬಯೋಟೆಕ್