ಹುಬ್ಬಳ್ಳಿ :ಸ್ಯಾಂಡಲ್ವುಡ್ನಲ್ಲಿ ಸೆಲೆಬ್ರಿಟಿ ಅನ್ನಿಸಿಕೊಂಡವರು ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿರುವುದು ದುರಂತ. ಯಾವುದೇ ಕ್ಷೇತ್ರದವರಾಗಲಿ ಜನತೆಗೆ ಮಾದರಿಯಾಗಿರಬೇಕು. ಯುವ ಪೀಳಿಗೆಗೆ ಸರಿಯಾದ ಮಾರ್ಗದರ್ಶನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಮಾಜವನ್ನು ಸರಿದಾರಿಗೆ ಕೊಂಡೊಯ್ಯುವ ಕಾರ್ಯ ಮಾಡಬೇಕು. ಅದನ್ನು ಬಿಟ್ಟು ಸಮಾಜವನ್ನು ತಪ್ಪುದಾರಿಗೆ ಎಳೆಯಬಾರದು ಎಂದು ಡ್ರಗ್ಸ್ ಪ್ರಕರಣ ಕುರಿತು ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಶಿ ಬೇಸರ ವ್ಯಕ್ತಪಡಿಸಿದರು.
ಈ ಬಗ್ಗೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸುತ್ತಿದೆ. ಸೂಕ್ತ ತನಿಖೆ ನಡೆಸುವ ಮೂಲಕ ಇದರ ಮೂಲ ನಿರ್ಣಾಮ ಮಾಡಬೇಕಿದೆ. ಇಂತಹ ಪ್ರಕರಣಗಳಲ್ಲಿ ಯಾವುದೇ ರಾಜಕೀಯ ವ್ಯಕ್ತಿಗಳು ಭಾಗಿಯಾಗಿದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದರು. ಪೊಲೀಸ್ ಇಲಾಖೆ ಯಾವುದೇ ರೀತಿ ಹಿಂಜರಿಯಬಾರದು. ಯಾರೇ ಇರಲಿ, ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದರು.
ಹುಬ್ಬಳ್ಳಿಯಲ್ಲಿ ಗಾಂಜಾ ಹಾವಳಿ ಹೆಚ್ಚಾಗುತ್ತಿದ್ದು, ಈ ಬಗ್ಗೆ ಪೊಲೀಸ್ ಆಯುಕ್ತರು ಸೂಕ್ತ ಕ್ರಮಕೈಗೊಳ್ಳಬೇಕು. ಗಾಂಜಾ ಹಾವಳಿ ತಡೆಗಟ್ಟುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು. ಸ್ಮಾರ್ಟ್ ಸಿಟಿಯ ವಿಳಂಬದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸ್ಮಾರ್ಟ್ ಸಿಟಿ ಯೋಜನೆ ಅಡಿ ಫ್ಲೈ ಓವರ್ ಕಾಮಗಾರಿ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.
ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಕೆಲವು ಕಾಮಗಾರಿಗಳು ಕಾರಣಾಂತರಗಳಿಂದ ವಿಳಂಭವಾಗುತ್ತಿವೆ. ಅಂತಹ ಕಾಮಗಾರಿಗಳು ಶೀಘ್ರವೇ ತ್ವರಿತ ಗತಿಯಲ್ಲಿ ನಡೆಯಲಿವೆ ಎಂದು ಭರವಸೆ ನೀಡಿದರು.