ಹುಬ್ಬಳ್ಳಿ :ನವದೆಹಲಿಯಲ್ಲಿ ನಾಳೆ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲು ರಾಜ್ಯದ ಸ್ತಬ್ಧಚಿತ್ರಕ್ಕೆ ಕೊನೆಗೂ ಅವಕಾಶ ಸಿಕ್ಕಿದೆ. ಪ್ರತಿ ವರ್ಷ ದೆಹಲಿಯ ಕರ್ತವ್ಯ ಪಥ್‌ನಲ್ಲಿ ನಡೆಯುವ ಗಣತಂತ್ರ ದಿನಾಚರಣೆಯ ಪರೇಡ್‍ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನ ಇರುತ್ತಿತ್ತು. ಆದರೆ, ಈ ವರ್ಷ ಆರಂಭದಲ್ಲಿ ಅನುಮತಿ ದೊರಕದೇ ಇದ್ದುದು ಕನ್ನಡಿಗರಲ್ಲಿ ಬೇಸರ ಉಂಟುಮಾಡಿತ್ತು. ಆದರೆ ಅಂತಿಮ ಕ್ಷಣದಲ್ಲಿ ಅನುಮತಿ ಸಿಕ್ಕಿರುವುದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ತಿಳಿಸಿದ್ದಾರೆ.
ಈ ಬಾರಿಯ ಗಣರಾಜ್ಯೋತ್ಸವದಲ್ಲಿ ತಮಿಳುನಾಡು, ಕೇರಳ ಸೇರಿ ಒಟ್ಟು 13 ರಾಜ್ಯಗಳ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಆದರೆ, ಕರ್ನಾಟಕದ ಟ್ಯಾಬ್ಲೊಗೆ ಅವಕಾಶ ದೊರತಿರಲಿಲ್ಲ. ಬೇರೆ ರಾಜ್ಯಗಳಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೇಂದ್ರದ ಆಯ್ಕೆ ಸಮಿತಿ ಅವಕಾಶ ನಿರಾಕರಿಸಿದೆ ಎನ್ನಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವಕಾಶ ಸಿಕ್ಕಿದ್ದು ಈ ಬಾರಿಯ ಸ್ತಬ್ಧಚಿತ್ರ ಹೊಸ ಸಂದೇಶವನ್ನು ದೇಶಕ್ಕೆ ನೀಡಲಿದೆ. ಸಾಧಕರ ಸೇವೆಯನ್ನು ಸ್ಮರಿಸಲಿದೆ ಎಂದು ಜೋಶಿ ಟ್ವೀಟ್ ಮಾಡುವ ಅಭಿಪ್ರಾಯ ತಿಳಿಸಿದ್ದಾರೆ.