ಧಾರವಾಡ: "ಸ್ವಾಮೀಜಿಗಳು ರಾಜಕೀಯದಿಂದ ಹೊರತಾಗಿರಬೇಕು. ಧರ್ಮ ರಾಜಕಾರಣವನ್ನು ಬೋಧಿಸಲೇಬಾರದು ಮತ್ತು ಧರ್ಮ ರಾಜಕಾರಣದಲ್ಲಿ ಪ್ರವೇಶ ಮಾಡಬಾರದು" ಎಂದು ಶ್ರೀ ನಿಜಗುಣಾನಂದ ಸ್ವಾಮೀಜಿ ಹೇಳಿದರು. ಧಾರವಾಡದಲ್ಲಿ ಡಿ ಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ನೊಣವಿನಕೆರೆ ಸ್ವಾಮೀಜಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ಲಿಂಗಾಯತ ಸ್ವಾಮೀಜಿಗಳು ಮಾತ್ರವಲ್ಲ ಮೌಲ್ವಿ, ಪಾದ್ರಿಗಳು ಸೇರಿದಂತೆ ಯಾವ ಧರ್ಮದ ನೇತಾರರು ರಾಜಕಾರಣ ಪ್ರವೇಶಿಸಬಾರದು" ಎಂದರು.
"ನಮ್ಮದೇನಿದ್ದರೂ ಧರ್ಮ, ಸಂಸ್ಕೃತಿ, ಸಂಸ್ಕಾರದ ವಿಚಾರದಲ್ಲಿರಬೇಕು. ಎಲ್ಲ ಸಮುದಾಯಗಳು ಸಂಕೀರ್ಣದಿಂದ ಹೊರಗೆ ಬಂದಿವೆ. ಮಠಾಧೀಶರು ರಾಜಕಾರಣದಲ್ಲಿದ್ದಾರೆ ಅಂತಾರೆ. ಮಾಧ್ಯಮಗಳೂ ರಾಜಕಾರಣ ಹೊರತುಪಡಿಸಿ ನಿಂತಿಲ್ಲ. ಮಾಧ್ಯಮ ಮತ್ತು ಸ್ವಾಮೀಜಿಗಳ ಇಬ್ಬರ ಪಾತ್ರವೂ ಸೋಲುತ್ತಿವೆ. ಇಂದು ಸಮಾಜದಲ್ಲಿ ಸಮತೋಲನ ತಪ್ಪಿದೆ. ಮಠಾಧೀಶರು ರಾಜಕಾರಣಕ್ಕೆ ಬರಬಾರದು ಎನ್ನುವುದು ಸತ್ಯ. ರಾಜಕಾರಣಿಗಳಿಗೆ ಸ್ವಾಮೀಜಿಗಳು ಬುದ್ಧಿ ಹೇಳಬಹುದು, ಮಾರ್ಗದರ್ಶನ ಮಾಡಬಹುದು. ಸ್ವಾಮೀಜಿಗಳು ರಾಜಕಾರಣಿಗಳ ಓಲೈಕೆ ಮಾಡುವ ಪ್ರಶ್ನೆ ಇಲ್ಲ" ಎಂದು ಹೇಳಿದರು.
"ಒಬ್ಬ ಸ್ವಾಮೀಜಿಯನ್ನು ಬಳಸಿಕೊಳ್ಳುವಾಗ ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು. ಧಾರ್ಮಿಕ ಕಾರ್ಯಕ್ಕೆ ಮಾತ್ರವೇ ಬಳಸಿಕೊಳ್ಳಬೇಕು. ರಾಜಕಾರಣಿಗಳು ಬೇರೆದ್ದಕ್ಕೆ ಬಳಸುವಾಗ ಸ್ವಾಮೀಜಿಗಳು ಎಚ್ಚರಿಕೆಯಿಂದ ಇರಬೇಕು. ಎಲ್ಲ ಪಕ್ಷದವರು ಮಠಗಳಿಗೆ ಬರುತ್ತಾರೆ. ಅವರ ಜೊತೆಯಲ್ಲಿ ಸ್ವಾಮೀಜಿಗಳು ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಮಠಾಧೀಶರನ್ನು ರಾಜಕಾರಣಕ್ಕೆ ದುರ್ಬಳಕೆ ಮಾಡಬಾರದು. ಈ ಅರಿವಿನ ಪ್ರಜ್ಞೆ ರಾಜಕಾರಣಿಗಳಿಗೆ ಇರಬೇಕು. ಆಗ ಯಾವ ಮಠಾಧೀಶರಿಗೂ ಒತ್ತಡ ಇರುವುದಿಲ್ಲ" ಎಂದರು.