ಹುಬ್ಬಳ್ಳಿ: ನೈಋತ್ಯ ರೈಲ್ವೆ ವಿಭಾಗದ ವತಿಯಿಂದ ಹುಬ್ಬಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರೈಲ್ವೆ ನೇಮಕಾತಿ ಮಂಡಳಿ ಕಾರ್ಯಾಲಯವನ್ನು ಇಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ ಅಂಗಡಿಯವರು ಉದ್ಘಾಟಿಸಿದ್ದಾರೆ.
ಉದ್ಘಾಟನೆ ಬಳಿಕ ಮಾತನಾಡಿದ ಅವರು, ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗಲೆಂದು ಬೋರ್ಡ್ ಸ್ಥಾಪನೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರೇ ಉದ್ಯೋಗಗಳನ್ನು ಪಡೆದುಕೊಳ್ಳಬೇಕು ಎಂದರು.
ರೈಲ್ವೆ ನೇಮಕಾತಿ ಮಂಡಳಿ ಕಾರ್ಯಾಲಯ ಉದ್ಘಾಟಿಸಿದ ಸುರೇಶ್ ಅಂಗಡಿ.. ಸಚಿವರಾದ ಜಗದೀಶ್ ಶೆಟ್ಟರ್ಗೆ ಹುಟ್ಟು ಹಬ್ಬದ ಗಿಪ್ಟ್ ನೀಡಿದ್ದೇವೆ. ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಎಕ್ಸ್‌ಪ್ರೆಸ್ ರೈಲು ಒದಗಿಸುವ ಸಿದ್ಧತೆಯ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಐದು ಗಂಟೆಯೊಳಗೆ ಹುಬ್ಬಳ್ಳಿಯಿಂದ ಬೆಂಗಳೂರು ತಲಪುವ ಹುಬ್ಬಳ್ಳಿ-ಬೆಂಗಳೂರು ರೈಲಿಗೆ ಮೊದಲು ಪ್ರಾಯೋಗಿಕವಾಗಿ ಚಾಲನೆ ನೀಡಲಾಗುತ್ತದೆ. ಬೀದರ್, ಬೆಳಗಾವಿ, ಬೆಂಗಳೂರು, ಮಂಗಳೂರು ನೂತನ ರೈಲು ಶೀಘ್ರದಲ್ಲೇ ಆರಂಭ ಮಾಡಲಾಗುವುದು ಎಂದರು.
ನಂತರ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರೈಲ್ವೆ ನೇಮಕಾತಿ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ. ಉದ್ಯೋಗಾಂಕ್ಷಿಗಳಿಗೆ ಯಾವುದೇ ಅಡತಡೆ ಇಲ್ಲದೇ ನೇಮಕಾತಿ ನಡೆಸಲಾಗುತ್ತಿದೆ. 50 ಲಕ್ಷ ಕೋಟಿ ರೈಲ್ವೆಯಲ್ಲಿ ಹೂಡಿಕೆಗೆ ಕೇಂದ್ರ ಅವಕಾಶ ನೀಡಿದೆ ಎಂದರು. ಮುಂದಿನ 10 ವರ್ಷದಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ರೈಲ್ವೆ ಕ್ಷೇತ್ರದಲ್ಲಿ ಆಗಲಿದ್ದು, ಇನ್ನೂ ರೈಲ್ವೆ ಸಿಬ್ಬಂದಿ ರೈಲನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಬಳಿಕ ಸುರೇಶ್ ಅಂಗಡಿ ಅವರು ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ, ಸಿದ್ದಾರೂಢ ಶ್ರೀ, ಗುರುನಾಥರೂಢ ಶ್ರೀ, ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಿದ್ದಾರೂಢ ಮಠದ ಆಡಳಿತ ಮಂಡಳಿ ಕೇಂದ್ರ ಸಚಿವರಿಗೆ ಶಾಲು ಹೊದಿಸಿ ಸನ್ಮಾಸಿದರು.