ಹುಬ್ಬಳ್ಳಿ: ಹುಬ್ಬಳ್ಳಿಯ ರಾಮನಗರದಲ್ಲಿರುವ ಹರಿಜನ ಸರ್ಕಾರಿ ಅನುದಾನಿತ ಶಾಲೆಗೆ ಕಟ್ಟಡ ಬಾಡಿಗೆ ತೆಗೆದುಕೊಳ್ಳಲು ಸುದೀಪ್ ಚಾರಿಟಬಲ್ ಟ್ರಸ್ಟ್ ಆರ್ಥಿಕ ಸಹಾಯ ನೀಡಲು ಮುಂದಾಗಿದೆ.
ವಾಣಿಜ್ಯನಗರಿ ಹುಬ್ಬಳ್ಳಿಯ ಹರಿಜನ ಶಾಲೆಯ ಸಮಸ್ಯೆಗೆ ಸ್ಪಂದಿಸಿದ ಕಿಚ್ಚ ಸುದೀಪ್ ಶಾಲೆಯ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದು, ಅವರಿಗೆ ಧೈರ್ಯ ತುಂಬಿದ್ದಾರೆ. ಇಲ್ಲಿನ ರಾಮನಗರದ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರ ಜೊತೆ ಕಿಚ್ಚ ಸುದೀಪ್ ಮಾತನಾಡಿದ್ದು, ಸಿಬ್ಬಂದಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ನಟನ ವಿಡಿಯೋ ಕಾಲ್ ಮಾತುಗಳಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ಇಂದು ಹುಬ್ಬಳ್ಳಿಯ ಶಾಲೆಗೆ ಭೇಟಿ ನೀಡಿದ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ತಂಡ, ಶಾಲೆಗೆ ಕಟ್ಟಡ ಬಾಡಿಗೆ ಪಡೆದುಕೊಳ್ಳಲು ಆರ್ಥಿಕ ಸಹಾಯ ಮಾಡಿದೆ. 1956ರಲ್ಲಿ ಶಾಲೆ ಆರಂಭವಾಗಿತ್ತು. ಇದೀಗ ಶಾಲೆಯಲ್ಲಿ ಪ್ರಸ್ತುತ ನೂರಾರು ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿಯೇ ಕುಳಿತು ಪಾಠ ಕೇಳುವಂತಾಗಿತ್ತು. ಈ ಹಿನ್ನೆಲೆ, ವಿದ್ಯಾರ್ಥಿಗಳ ಕಷ್ಟಕ್ಕೆ ಸ್ಪಂದಿಸಿದ ಕಿಚ್ಚ ಸುದೀಪ್ ಸುಡು ಬಿಸಿಲಿನಲ್ಲಿಯೇ ಕುಳಿತು ಓದುತ್ತಿರುವ ವಿದ್ಯಾರ್ಥಿಗಳಿಗೆ ನೆರಳಾಗಿದ್ದಾರೆ.