ಹುಬ್ಬಳ್ಳಿ: ನೆಚ್ಚಿನ ಶಿಕ್ಷಕಿಯೋರ್ವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಣ್ಣೀರಿನ ವಿದಾಯ ಹೇಳಿ ಟೀಚರ್ಗೆ ಬೀಳ್ಕೊಡುಗೆ ನೀಡಿದ ಮನಕಲಕುವ ಘಟನೆ ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದಲ್ಲಿ ನಡೆದಿದೆ.
"ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ" ಎಂಬಂತೆ ಗುರು-ಶಿಷ್ಯರ ಸಂಬಂಧವೇ ಹಾಗೆ. ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ರತ್ನಾ ಗ್ರಾಮಪುರೋಹಿತ ಎಂಬುವರನ್ನು ಕುಂದಗೋಳಕ್ಕೆ ವರ್ಗಾವಣೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಬೇರೆ ಶಾಲೆಗೆ ಹೋಗುತ್ತಿದ್ದ ಶಿಕ್ಷಕಿಯನ್ನು ವಿದ್ಯಾರ್ಥಿಗಳು ಇಲ್ಲಿಯೇ ಇರಿ ಟೀಚರ್ ಎಂದು ಪರಿ ಪರಿಯಾಗಿ ಬೇಡಿಕೊಂಡರು. ಅಚ್ಚುಮೆಚ್ಚಿನ ಶಿಕ್ಷಕಿ ರತ್ನಾ ಅವರಿಗೆ ಬೀಳ್ಕೊಡುಗೆ ನೀಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಕಿಯನ್ನು ಸುತ್ತುವರೆದು ಕಣ್ಣೀರು ಸುರಿಸಿದ್ದು, ನೋಡುಗರ ಮನಕಲಕುವಂತಿತ್ತು.
ಶಿಕ್ಷಕರ ವರ್ಗಾವಣೆ ವಿರೋಧಿಸಿ ಪ್ರತಿಭಟನೆ :ತಮ್ಮ ಶಾಲೆಯ ಶಿಕ್ಷಕರನ್ನು ವರ್ಗಾವಣೆ ಮಾಡಿದ ಶಿಕ್ಷಣ ಇಲಾಖೆಯ ಕ್ರಮವನ್ನು ಖಂಡಿಸಿ ವಿಶೇಷ ಚೇತನ ಮಕ್ಕಳು ತೀರ್ಥಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ ಸರ್ಕಾರಿ ಶಾಲೆಯ ಮಕ್ಳಳು ತಮ್ಮ ಶಾಲೆಯ ಶಿಕ್ಷಕ ಕುಮಾರ ಅವರ ವರ್ಗಾವಣೆಯನ್ನು ಹಿಂಪಡೆಯಬೇಕೆಂದು ಪಟ್ಟು ಹಿಡಿದು ನಿನ್ನೆ ಪ್ರತಿಭಟನೆ ಮಾಡಿದರು.
ಸೊಪ್ಪುಗುಡ್ಡೆಯ ಸರ್ಕಾರಿ ಶಾಲೆಯ ವಿಶೇಷ ಚೇತನ ಮಕ್ಕಳು ತಮ್ಮ ನೆಚ್ಚಿನ ಶಿಕ್ಷಕರನ್ನು ವರ್ಗಾವಣೆ ಮಾಡದೆ ಪುನಃ ನಮ್ಮ ಶಾಲೆಗೆ ವಾಪಸ್ ಕಳುಹಿಸಿ ಎಂದು ಊಟ ಬಿಟ್ಟು ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಕ್ಕಳಿಗೆ ಪೋಷಕರು ಸಹ ಸಾಥ್ ನೀಡಿದರು.