ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ ಹುಬ್ಬಳ್ಳಿ:ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಧಾರವಾಡ ಜಿಲ್ಲಾ ಘಟಕದ ಆಶ್ರಯದಲ್ಲಿ ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿಗಾಗಿ ಒತ್ತಾಯಿಸಿ 6 ನೇ ಹಂತದ ಚಳವಳಿಯನ್ನು ಅಕ್ಟೋಬರ್ 13 ರಂದು ಬೆಳಗ್ಗೆ 10ಕ್ಕೆ ನಗರದ ಹೊರವಲಯದ ಗಬ್ಬೂರು ಬೈಪಾಸ್ ಪಕ್ಕದ ಮೈದಾನದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯಂಜಯ ಸ್ವಾಮೀಜಿ ತಿಳಿಸಿದರು.
ಹೋರಾಟ ಯಾತ್ರೆ:ನಗರದಲ್ಲಿ ಇಂದು (ಬುಧವಾರ) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ಈಗಾಗಲೇ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಹೋರಾಟ ಯಾತ್ರೆ ಆರಂಭವಾಗಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಈಗ ಧಾರವಾಡ ಜಿಲ್ಲೆಯ ಸಮಾವೇಶ ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ಮೈದಾನದಲ್ಲಿ ಮಾಡಲಾಗುತ್ತದೆ'' ಎಂದರು.
ಸಾಮೂಹಿಕ ಇಷ್ಟಲಿಂಗ ಮಹಾಪೂಜೆ:''ಅಕ್ಟೋಬರ್ 13 ರಂದು ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ ಚಳವಳಿಗೆ ಚಾಲನೆ ನೀಡಲಾಗುವುದು. ನಂತರ ಬಂಕಾಪುರಚೌಕ, ಯಲ್ಲಾಪುರ ಓಣಿ ಮಾರ್ಗವಾಗಿ ಗಬ್ಬೂರು ರಾಷ್ಟ್ರೀಯ ಹೆದ್ದಾರಿಯ ವರೆಗೆ ಪಾದಯಾತ್ರೆ ನಡೆಸಿ, ಧಾರವಾಡ ಜಿಲ್ಲಾ ಮಟ್ಟದ ಸಾಮೂಹಿಕ ಇಷ್ಟಲಿಂಗ ಮಹಾಪೂಜೆಯೊಂದಿಗೆ ರಸ್ತೆ ತಡೆ ನಡೆಸಿ ಹೋರಾಟ ಮಾಡಲಾಗುವುದು'' ಎಂದು ಅವರು ಹೇಳಿದರು.
ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹ:''ಈಗಾಗಲೇ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಅನುಷ್ಠಾನ ಹಾಗೂ ಲಿಂಗಾಯತ ಉಪ ಸಮಾಜಗಳನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಕೂಡಲೇ ಶಿಫಾರಸು ಸೇರಿದಂತೆ ವಿವಿಧ ಬೇಡಿಕೆಗಳನ್ನು ಇಟ್ಟು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುವ ಮೂಲಕ ಹೋರಾಟ ಆರಂಭಿಸಲಾಗಿದೆ'' ಎಂದು ವಿವರಿಸಿದರು.
ಸರ್ಕಾರ ನಮ್ಮನ್ನು ಕರೆದು ಮಾತುಕತೆಗೆ ಕರೆಯಬೇಕು- ಸ್ವಾಮೀಜಿ ಒತ್ತಾಯ:''2ಎ ಮೀಸಲಾತಿ, ಲಿಂಗಾಯತ ಉಪ ಪಂಗಡಗಳಿಗೆ ಕೇಂದ್ರದಿಂದ ಒಬಿಸಿ ದರ್ಜೆ ನೀಡಲು ಮೂರು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಕಳೆದ ಸರ್ಕಾರ ಕೊನೆಯ ಗಳಿಗೆಯಲ್ಲಿ ಮೀಸಲಾತಿ ಘೋಷಣೆ ಮಾಡಲಾಯಿತು. ಚುನಾವಣೆ ಘೋಷಣೆ, ನೀತಿ ಸಂಹಿತೆಯಿಂದ ಮೀಸಲಾತಿ ಜಾರಿ ಆಗಲಿಲ್ಲ. ಕಾನೂನು ತೊಡಕು ಆಯಿತು. ಈಗಿನ ಸರ್ಕಾರಕ್ಕೆ ಸಹ ನಾವು ಕೇಳ್ತಾ ಇದ್ದೇವೆ, ನಮ್ಮ ಹಕ್ಕು ಕೊಡಿ ಅಂತಾ. ಹೋರಾಟದ ಮೂಲಕ ನಮ್ಮ ಮೀಸಲಾತಿ ಪಡದೇ ತಿರುತ್ತೇವೆ. ಸರ್ಕಾರ ನಮ್ಮನ್ನು ಕರೆದು ಮಾತುಕತೆಗೆ ಕರೆಯಬೇಕು'' ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ವೀರೇಶ ಉಂಡಿ, ರಾಜಶೇಖರ ಮೆಣಸಿನಕಾಯಿ, ದೀಪಾ ಗೌರಿ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ:ದೇವೇಗೌಡರ ಮನೆ ಅಂಗಳದಲ್ಲಿ ಅಂಗಿ ಮಡಚಿ ಮುಖ ಒಣಗಿಸಿಕೊಂಡು ನಿಂತ ಧೀರರು ಯಾರೆಂದು ಗೊತ್ತಿಲ್ಲವೇ?: ಕೈ ವಿರುದ್ಧ ಜೆಡಿಎಸ್ ಕಿಡಿ