ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಡಗರ ಸಂಭ್ರಮದಿಂದ ರಂಜಾನ್ ಹಬ್ಬದ ಆಚರಣೆ ಮಾಡಲಾಯಿತು. ಇಲ್ಲಿನ ಚೆನ್ನಮ್ಮ ವೃತ್ತದಲ್ಲಿರುವ ಐತಿಹಾಸಿಕ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರು ಮೌಲಾನಾ ಜಹೀರುದ್ದೀನ್ ಸಾಬ್ ಪ್ರಾರ್ಥನಾ ವಿಧಿ ಬೋಧನೆ ಮಾಡಿ, ಕುರಾನ್ ಪಠಣ ಮಾಡಿದರು. ಶಾಸಕ ಪ್ರಸಾದ ಸದಾನಂದ ಡಂಗನವರ, ಮಹೇಂದ್ರ ಸಿಂಘಿ, ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ಸೇರಿದಂತೆ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾಯಚೂರು: ಜಿಲ್ಲೆಯಲ್ಲಿ ಮುಸ್ಲಿಂ ಭಾಂಧವರು ಸಂಭ್ರಮ-ಸಡಗರದಿಂದ ರಂಜಾನ್ ಹಬ್ಬವನ್ನು ಆಚರಿಸುತ್ತಿದ್ದಾರೆ. ನಗರದ ಈದ್ಗಾ ಮೈದಾನದಲ್ಲಿ ಸೇರಿದ ಮುಸ್ಲಿಮರು ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಪ್ರಾರ್ಥನೆಗೆ ಆಗಮಿಸಿದ ಚಿಣ್ಣರ ಉಡುಪುಗಳು ವಿಶೇಷ ಗಮನ ಸೆಳೆದವು. ಜಿಲ್ಲಾಧಿಕಾರಿ ಶರತ್ ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕಿಶೋರ್ ಬಾಬು ಸೇರಿದಂತೆ ರಾಜಕೀಯ ಗಣ್ಯರು ಈದ್ಗಾ ಮೈದಾನದ ಬಳಿ ಮುಸ್ಲಿಮರಿಗೆ ಶುಭಾಶಯ ಕೋರಿದರು. ಬಿರು ಬೇಸಿಗೆ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಚಾಮರಾಜನಗರ: ಗಡಿಜಿಲ್ಲೆ ಚಾಮರಾಜನಗರದಲ್ಲೂ ಕೂಡ ಈದ್ ಉಲ್ ಫಿತರ್ ಹಬ್ಬದ ಸಂಭ್ರಮ ಜೋರಾಗಿತ್ತು. ನಗರದ ಹಳೇ ಮತ್ತು ಹೊಸ ಈದ್ಗಾ ಮೈದಾನಗಳಲ್ಲಿ ಸೇರಿದ ಸಾವಿರಾರು ಮಂದಿ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭ ಕೋರಿಕೊಂಡರು. ಕೆಲವರು ಅಲ್ಲಲ್ಲಿ ಶಕ್ತಾ ನುಸಾರ ದಾನ ಧರ್ಮಗಳನ್ನು ಮಾಡುತ್ತಾ, ಸಿಹಿ ವಿತರಿಸಿದ್ದು ಕಂಡು ಬಂತು.