ಮಾಜಿ ಶಾಸಕ ಅಶೋಕ ಕಾಟವೆ ಪ್ರತಿಕ್ರಿಯೆ ಹುಬ್ಬಳ್ಳಿ: ನನಗೆ ಪ್ರಧಾನಿ ಮೋದಿ ಅವರಂದ್ರೆ ಬಹಳ ಪ್ರೀತಿ. ಹೀಗಾಗಿ ಅವರಿಗೆ ಹಾರ ಹಾಕಬೇಕೆಂದು ಹೋಗಿದ್ದೆ. ಪ್ರಧಾನಿಗಳನ್ನು ಹತ್ತಿರದಿಂದ ನೋಡಬೇಕೆಂಬ ಆಸೆ ಇತ್ತು ಎಂದು ಹುಬ್ಬಳ್ಳಿಯಲ್ಲಿ ರೋಡ್ ಶೋ ವೇಳೆ ಪ್ರಧಾನಿ ಮೋದಿಗೆ ಹಾರ ಹಾಕಲು ಯತ್ನಿಸಿದ್ದ ಬಾಲಕ ಹೇಳಿದ್ದಾನೆ.
ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಯುವಜನೋತ್ಸವ ಉದ್ಘಾಟನೆಗಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನಕ್ಕೆ ವಾಹನದಲ್ಲಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಪ್ರಧಾನಿಗೆ ಬಾಲಕನೊಬ್ಬ ಪೊಲೀಸರ ಭದ್ರತೆ ಬೇಧಿಸಿ ಬ್ಯಾರಿಕೇಡ್ ಹಾರಿ ಹೂವಿನ ಹಾರ ಹಾಕಲು ಮುಂದಾಗಿದ್ದಾನೆ. ಇದೀಗ ಘಟನೆಗೆ ಸಂಬಂಧಿಸಿದಂತೆ ಬಾಲಕ ಕುನಾಲ್ ಧೋಂಗಡಿ ಎಂಬಾತ ಮಾಧ್ಯಮಗಳೊಂದಿಗೆ ಮಾತನಾಡಿದ್ದಾನೆ.
'ನನಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇನ್ನಷ್ಟು ಹತ್ತಿರದಿಂದ ನೋಡಬೇಕು. ಅವರನ್ನು ಮನೆಗೆ ಕರೆಯಬೇಕೆಂಬ ಆಸೆ ಇದೆ. ಅವರ ಭಾಷಣದಿಂದ ನಾನು ಪ್ರೇರಿತನಾಗಿದ್ದೇನೆ. ಪ್ರಧಾನಿಯವರನ್ನು ನೋಡಲು ನನ್ನ ಅಜ್ಜ, ಮಾವ, ಎರಡೂವರೆ ವರ್ಷದ ಮಗುವಿನ ಜೊತೆಗೆ ಹೋಗಿದ್ವಿ. ಮಗುವಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಡ್ರೆಸ್ ಹಾಕಿಸಿದ್ವಿ. ಮಗುವಿನ ಕೈಯಿಂದಲೇ ಪ್ರಧಾನಿಗೆ ಹಾರ ಕೊಡಿಸಬೇಕು ಅಂತ ಅಂದುಕೊಂಡಿದ್ವಿ. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ನಾನೇ ಹಾರ ಹಾಕಬೇಕೆಂದು ಹೋಗಿದ್ದೆ. ಪ್ರಧಾನಿಗಳಿಗೆ ಶೇಕ್ ಹ್ಯಾಂಡ್ ಮಾಡಬೇಕೆಂಬ ಆಸೆ ನನ್ನದಾಗಿತ್ತು. ಆದರೆ ಪೊಲೀಸರು ನನ್ನನ್ನು ತಡೆದರು' ಎಂದು ಹೇಳಿದ್ದಾನೆ.
'ಮೋದಿ ಮನುಷ್ಯ ಅಲ್ಲ, ದೇವರು. ಹಾಗಾಗಿ ನಾನು ಅವರನ್ನು ನೊಡೋಕೆ ಹೋಗಿದ್ದೆ. ನನಗೆ ಅವರ ಎಡಗೈ ಸ್ಪರ್ಶವಾಗಿತ್ತು. ನನ್ನ ಹಾರ ತೆಗೆದುಕೊಂಡಿದ್ದರು. ನಾನು 2 ವರ್ಷದ ಹಿಂದೆ ನರೇಂದ್ರ ಮೋದಿಯವರು ಧಾರವಾಡಕ್ಕೆ ಬಂದಾಗ ನೋಡಿದ್ದೆ. ಈಗ ಮತ್ತೆ ಅವರು ಬರುವ ವಿಚಾರ ತಿಳಿದು ಅಲ್ಲಿಗೆ ಹೋಗಿದ್ದೆ. ಪ್ರಧಾನಿ ಮೇಲೆ ನನಗೆ ಬಹಳ ಅಭಿಮಾನ ಇದೆ. ಅವರೊಂದಿಗೆ ಮಾತನಾಡಬೇಕು ಎಂಬ ಆಸೆಯೂ ಇದೆ' ಎಂದಿದ್ದಾನೆ.
ಪ್ರಧಾನಿಗೆ ಹಾರ ಹಾಕಲು ಯತ್ನಿಸಿದ್ದ ಬಾಲಕ ಹೇಳಿದ್ದು ಹೀಗೆ ಎಸ್ಎಸ್ಕೆ ಸಮಾಜದ ಮುಖಂಡ ಹಾಗೂ ಮಾಜಿ ಶಾಸಕ ಅಶೋಕ ಕಾಟವೆ ಮಾತನಾಡಿ, 'ಕುನಾಲ್ ದೋಂಗಡಿ ಒಬ್ಬ ಉತ್ಸಾಹಿ ಬಾಲಕ. ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ತೊಂದರೆ ಆಗಿಲ್ಲ. ಆತ ಅಪ್ಪಟ ನರೇಂದ್ರ ಮೋದಿ ಅಭಿಮಾನಿ. ಆದ್ರೆ ಪೊಲೀಸ್ ಭದ್ರಕೊಟೆ ಬೇಧಿಸಿದ್ದು ತಪ್ಪು. ಆತನಿಗೆ ಆಗಿದ್ದರೆ ಕ್ಷಮೆ ಇರಲಿ. ಬಾಲಕನಿಗೆ ಪೊಲೀಸ್ ಭದ್ರತೆ ಮತ್ತು ಮುಂದಿನ ಪರಿಣಾಮದ ಬಗ್ಗೆ ಅರಿವಿಲ್ಲ' ಎಂದು ಸ್ಪಷ್ಟನೆ ಕೊಟ್ಟರು.
'ಪ್ರಧಾನಮಂತ್ರಿಗಳಿಗೆ ಬಹಳ ದೊಡ್ಡ ಪ್ರಮಾಣದ ಭದ್ರತೆ ಇರುತ್ತದೆ. ಅದನ್ನು ಮೀರಿ ಒಬ್ಬ ಬಾಲಕ ಪ್ರಧಾನಿಗೆ ಮಾಲೆ ಹಾಕಲು ಬಂದಿದ್ದ. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಆತ ಪ್ರಧಾನಿ ಮೇಲಿನ ಅಭಿಮಾನದಿಂದ, ಪ್ರೀತಿಯಿಂದ ಹೀಗೆ ಮಾಡಿದ್ದಾನೆ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ ಪ್ರಧಾನಿ ಮೋದಿ ರೋಡ್ ಶೋ ವೇಳೆ ಭದ್ರತೆ ಲೋಪ.. ಆರೋಪವನ್ನು ತಳ್ಳಿ ಹಾಕಿದ ಪೊಲೀಸ್ ಅಧಿಕಾರಿಗಳು