ಹುಬ್ಬಳ್ಳಿ:ಉತ್ತರ ಕರ್ನಾಟಕ ಭಾಗದ ಯುವಕರ ಬಹುದಿನಗಳ ಬೇಡಿಕೆಯಾಗಿದ್ದ ರೈಲ್ವೆ ನೇಮಕಾತಿ ಕೇಂದ್ರವನ್ನು ಉದ್ಘಾಟನೆ ಮಾಡಲಾಗಿದ್ದು, ಅದನ್ನು ಈ ಭಾಗದ ಯುವಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು.
ನಗರದಲ್ಲಿ ರೈಲ್ವೆ ನೇಮಕಾತಿ ಮಂಡಳಿ ಕಚೇರಿ ಉದ್ಘಾಟನೆ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ರೈಲ್ವೆ ನೇಮಕಾತಿಯ ಕಂಪ್ಯೂಟರ್ ಎಕ್ಸಾಂ ಕುರಿತ ಮಾಹಿತಿಯನ್ನು ಕಚೇರಿಯಲ್ಲಿ ತಿಳಿಸಲಾಗುವುದು. ರೈಲ್ವೆ ಉದ್ಯೋಗ ಪಡೆಯಲು ಇಚ್ಛೆ ಹೊಂದಿರುವ ಯುವಕರು ಉತ್ತಮ ತರಬೇತಿ ಪಡೆದು, ಪರೀಕ್ಷೆಗಳನ್ನು ಪಾಸ್ ಮಾಡಿ ಉದ್ಯೋಗ ಪಡೆಯಬೇಕೆಂದರು.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ.. ಬೆಂಗಳೂರು-ಹುಬ್ಬಳ್ಳಿ ನಡುವೆ ಫಾಸ್ಟ್ ಟ್ರೈನ್ ಐದು ಘಂಟೆಗಳಲ್ಲೇ ಸಂಚರಿಸಲು ಚಿಂತನೆ ನಡೆಸಲಾಗಿದೆ. ಅದರ ಬಗ್ಗೆ ಅಧ್ಯಯನ ಮಾಡಲು ಸೂಚಿಸಲಾಗಿದೆ. ಜೊತೆಗೆ ಬೀದರ್- ಗುಲ್ಬರ್ಗ-ಬೆಂಗಳೂರು, ಬೆಂಗಳೂರು-ಮಂಗಳೂರು ನೂತನ ರೈಲಿಗೆ ಚಾಲನೆ ನೀಡಿದ್ದು, ಮೈಸೂರು ಡೆಮೋ ಕೂಡಾ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಜನರಿಗೆ ಅನೇಕ ಯೋಜನೆಗಳನ್ನು ಕೊಡಲಾಗುವುದು ಎಂದರು.
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದನ್ನೂ ಲಘುವಾಗಿ ಪರಿಗಣಿಸಲಾಗುವುದಿಲ್ಲ. ಅಲ್ಲದೇ ರೈತ ಹೊಲಗಳಲ್ಲಿ ದನಗಳನ್ನು ಓಡಿಸಲು ಸ್ಫೋಟಕಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಎಂದು ತಿಳಿದು ಬಂದಿದೆ. ಇನ್ನೂ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.