ಹುಬ್ಬಳ್ಳಿ: ಹಳೆ ದ್ವೇಷದ ಹಿನ್ನೆಲೆ ವ್ಯಕ್ತಿಯೊಬ್ಬನ ಮೇಲೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಹಳೆ ಹುಬ್ಬಳ್ಳಿಯ ಕಟಿಗಾರ ಓಣಿಯಲ್ಲಿ ಜರುಗಿದೆ.
ಸಾಧಿಕ್ ಎಂಬುವವರಿಗೆ ಚಾಕುವಿನಿಂದ ಇರಿಯಲಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸೀಫ್ ಚಂಗಾಪುರಿ, ಉಲ್ಫಾತ್ ಬಂಕಾಪುರ, ಫರ್ದಿನ್ ಚಂಗಾಪುರಿ ಹಾಗೂ ಇರ್ಫಾನ್ ಬಂಕಾಪುರ ಎಂಬುವವರು ಕೊಲೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರು ತಿಂಗಳ ಹಿಂದೆ ಎತ್ತಿನ ಬಂಡಿಗೆ ಕುದುರೆ ಕಟ್ಟಿ ಓಡಿಸುವ ಸ್ಪರ್ಧೆಯಲ್ಲಿ ಪ್ರಮುಖ ಆರೋಪಿ ಆಸೀಫ್ ಮತ್ತು ಗಾಯಾಳು ಸಾಧಿಕ್ ಮಧ್ಯೆ ಜಗಳವಾಗಿತ್ತು. ಇದೇ ವಿಷಯಕ್ಕೆ ದ್ವೇಷ ಸಾಧಿಸುತ್ತಿದ್ದ ಆಸೀಫ್, ಮಧ್ಯಾಹ್ನ ಓಣಿಯಲ್ಲಿ ಸಾಧಿಕ್ ಹೋಗುತ್ತಿದ್ದಾಗ ಜಗಳ ತೆಗೆದು ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಆಗ ಸಾಧಿಕ್ ತಮ್ಮ ಇಮಾಮ್ ಹುಸೇನ್ ಕಿತ್ತೂರ ಅಣ್ಣನನ್ನು ಬಿಡಿಸಿಕೊಳ್ಳಲು ಬಂದಿದ್ದಾರೆ. ಅವರ ಮೇಲೂ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಸಾಧಿಕ್ ತಂದೆ ಹಾಗೂ ಅಣ್ಣಂದಿರು ಸಹ ಜಗಳ ಬಿಡಿಸಲು ಬಂದಿದ್ದಾರೆ. ಈ ವೇಳೆ ಇತರ ಆರೋಪಿಗಳಾದ ಫರ್ದಿನ್ ಮತ್ತು ಇರ್ಫಾನ್ ಇಬ್ಬರೂ ಸಾಧಿಕ್ ಬೆನ್ನಿಗೆ ಚಾಕುವಿನಿಂದ ಇರಿದಿದ್ದಾರೆ.
ಈ ಸಂಬಂಧ ಕಸಬಾಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.