ಹುಬ್ಬಳ್ಳಿ :ದತ್ತ ಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕೆಂದು ಆಗ್ರಹಿಸಿ ಜುಲೈ 5 ರಂದು ಗುರು ದೇವದತ್ತ ನಾಮದ ಒಂದು ಕೋಟಿ ಜಪ ಯಜ್ಞ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹರಡುತ್ತಿದೆ. ಈ ದಿಸೆಯಲ್ಲಿ ಎಲ್ಲರೂ ಮನೆಯಲ್ಲೇ ಇದ್ದುಕೊಂಡು ಕೊರೊನಾ ತಡೆಗೆ ಯಜ್ಞ ಮಾಡಿ ತಮ್ಮ ಆರೋಗ್ಯ ಹಾಗೂ ದೇಶದ ಆರೊಗ್ಯ ಕಾಪಾಡಬೇಕು ಎಂದು ಮನವಿ ಮಾಡಿದರು.
ದತ್ತ ಪೀಠದ ಕುರಿತು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾಧ್ಯಮಗೋಷ್ಠಿ ಕಳೆದ 22 ವರ್ಷಗಳಿಂದ ದತ್ತ ಪೀಠಕ್ಕಾಗಿ ಕಾನೂನು ಹೋರಾಟ ನಡೆಯುತ್ತಿದೆ. ಈಗಾಗಲೇ ಕೋರ್ಟ್ ಹಿಂದೂಗಳ ಪರ ಆದೇಶ ನೀಡಿದ್ದರೂ ಅದನ್ನು ಪ್ರಶ್ನಿಸಿ ಸುಪ್ರೀಂ ಕೊರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಜಸ್ಟೀಸ್ ನಾಗಮೋಹನ್ ದಾಸ್ ವರದಿ ಸ್ವೀಕಾರ ಮಾಡಿದೆ. ಆದ್ರೆ, ಆ ವರದಿಯಿಂದ ಹಿಂದೂಗಳಿಗೆ ಅನ್ಯಾಯವಾಗಲಿದೆ. ಹೀಗಾಗಿ ಬಿಜೆಪಿ ಸರ್ಕಾರ ಈ ವರದಿಯನ್ನು ಮರುಪರಿಶೀಲಿಸಿ ಹಿಂದೂಗಳಿಗೆ ದತ್ತ ಪೀಠವನ್ನು ಒಪ್ಪಿಸಿ ಸುಗ್ರೀವಾಜ್ಞೆ ಹೊರಡಿಸಬೇಕು ಆಗ್ರಹಿಸಿ ಯಜ್ಞದ ಮೂಲಕ ಸರ್ಕಾರಕ್ಕೆ ಒತ್ತಡ ಹಾಕಲಾಗುತ್ತಿದೆ ಎಂದರು.
ಕೊರೊನಾ ತಡೆಗೆ ಆಯುರ್ವೇದದಲ್ಲಿ ಸಂಶೋಧನೆಯಾಗುತ್ತಿದೆ. ಗಿರಿಧರ ಕಜೆ ಹಾಗೂ ಪತಂಜಲಿಯವರು ಕಂಡು ಹಿಡಿದಿರುವ ಔಷಧಿಗಳನ್ನು ಸರ್ಕಾರ ಅಂಗೀಕರಿಸಬೇಕು ಎಂದು ಮುತಾಲಿಕ್ ಇದೇ ವೇಳೆ ಒತ್ತಾಯಿಸಿದರು.