ಹುಬ್ಬಳ್ಳಿ :ಬಲವಂತದ ಮತಾಂತರ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದರ ನಡುವೆ ಮತಾಂತರಕ್ಕೆ ಒಳಗಾದ ಶ್ರೀಧರ್ ಅಲಿಯಾಸ್ ಸಲ್ಮಾನ್ ಮಾತನಾಡಿದ ವಿಡಿಯೋ ಈಟಿವಿ ಭಾರತಕ್ಕೆ ಲಭ್ಯವಾಗಿದ್ದು, ಮತಾಂತರದ ಹಿಂದಿನ ಕಥೆಯನ್ನು ವಿಡಿಯೋದಲ್ಲಿ ಬಿಚ್ಚಿಟ್ಟಿದ್ದಾರೆ.
'ನಾನು ಮೂಲತಃ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಯಡುವಿನಳ್ಳಿ ಗ್ರಾಮದ ನಿವಾಸಿ. ನನ್ನ ತಂದೆ, ತಾಯಿ ಇಬ್ಬರು ಮೃತಪಟ್ಟಿದ್ದಾರೆ. ಅವರನ್ನು ಕಳೆದುಕೊಂಡ ನಾನು ಆಸ್ತಿ ವಿವಾದದಿಂದ ಬೇಸತ್ತು ಸೈಬರ್ ಸೆಂಟರ್ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದೆ. ಆಗ ನನಗೆ ಮಂಡ್ಯ ಜಿಲ್ಲೆಯ ಕೊಪ್ಪದಲ್ಲಿ ಅತ್ತಾವರ್ ರೆಹಮಾನ್ ಎಂಬಾತ ಪರಿಚಯ ಆಗುತ್ತಾನೆ. ಆತ ಟೀ ಮಾರುತ್ತಿದ್ದ, ನಾನು ಕಷ್ಟದಲ್ಲಿ ಇದ್ದೇನೆ ಎಂದು ಹೇಳಿಕೊಂಡಾಗ ಅತ್ತಾವರ್ ವ್ಯಕ್ತಿಯೊಬ್ಬರ ಬಳಿ ಕರೆದುಕೊಂಡು ಹೋಗಿದ್ದ.
ಒಳ್ಳೆಯದಾಗುತ್ತೆ ಎಂದು ಮದುವೆಗೆ ಕರೆದುಕೊಂಡು ಹೋದರು. ಅಲ್ಲಿ ಇಲಿಯಾಸ್ ನಗರದಲ್ಲಿ ಡಾ. ರಾಫಿಸಾಬ್ ಬಳಿ ಕರೆದೊಯ್ದರು. ಅಲ್ಲಿನ ನನಗೆ ಅವರ ಧರ್ಮದ ಬಗ್ಗೆ ಹೇಳುತ್ತ ಬ್ರೇನ್ ವಾಷ್ ಮಾಡಿದರು. ಆಗ ನಾನು ಇಸ್ಲಾಂ ಧರ್ಮದ ಬಗ್ಗೆ ಆಕರ್ಷಿತನಾದೆ ಎಂದು ತನಗಾದ ನೋವನ್ನು ಶ್ರೀಧರ್ ಬಿಚ್ಚಿಟ್ಟಿದ್ದಾರೆ.
'ಇಲಿಯಾಸ್ ನಗರದಲ್ಲಿ ಖಾಲಿದ್ ಡಾಕ್ಟರ್, ನದೀಮ್, ನಯಾಜ್ ಪಾಷಾ ಬಳಿ ನನ್ನ ಕರೆದುಕೊಂಡು ಹೋದರು. ಅಲ್ಲಿ ಖತ್ನಾ ಮಾಡಿದರು, ಪ್ರೀತಿ ವಿಶ್ವಾಸದಿಂದ ನೋಡಿಕೊಂಡು ಖತ್ನಾ ಮಾಡಿಸಿದರು. ನಂತರ ಮಟನ್ ತಿನ್ನಲು ಒತ್ತಾಯಿಸಿದರು. ನನಗೆ ಇಷ್ಟ ಇಲ್ಲ ಅಂದರೂ ನನಗೆ ಧಮ್ಕಿ ಹಾಕಿದರು. ರಿವಾಲ್ವರ್ ಕೊಟ್ಟು ಫೋಟೋ ತಗೆದುಕೊಂಡು ಭಯೋತ್ಪಾದಕ ಎಂದು ಅಪ್ಲೋಡ್ ಮಾಡುತ್ತೇವೆ ಎಂದು ಬ್ಲಾಕ್ಮೇಲ್ ಮಾಡಿದರು' ಎಂದಿದ್ದಾನೆ.
ಶ್ರೀಧರ್ ಮಾತನಾಡಿದ ವಿಡಿಯೋ ಈಟಿವಿ ಭಾರತಕ್ಕೆ ಲಭ್ಯ 'ಟೀಮ್ ಮಾಡಿ ನಮಾಜ್ ಮತ್ತು ಕುರಾನ್ ಕಲಿಯಲು ಒಂದೂವರೆ ತಿಂಗಳು ತಿರುಪತಿಗೆ ಕಳಿಸಿದರು. ಅವರ ದೇವರು ಬಿಟ್ಟು ಬೇರೆ ಯಾವ ದೇವರನ್ನು ಪೂಜೆ ಮಾಡದಂತೆ ನನಗೆ ಆರ್ಡರ್ ಮಾಡ್ತಾರೆ. ನಯಾಜ್ ಪಾಷಾ ಮಸೀದಿಯ ಪ್ರೆಸಿಡೆಂಟ್ ಆಗಿದ್ದ. ಸುಮಾರು ಐವತ್ತು ಜನರನ್ನು ಮುಸ್ಲಿಂ ಆಗಿ ಕನ್ವರ್ಟ್ ಮಾಡಿದ್ದಾರೆ' ಎಂದಿದ್ದಾನೆ.
ನಂತರ ಅವರಿಗೆ ಹುಡುಗರು ಮತ್ತು ಹುಡುಗಿಯರನ್ನು ಇಸ್ಮಾಂ ಧರ್ಮಕ್ಕೆ ಕನ್ವರ್ಟ್ ಮಾಡಲು ಹೇಳುತ್ತಾರೆ. ಕನ್ವರ್ಟ್ ಮಾಡಲು ಟಾರ್ಗೆಟ್ ಕೊಡ್ತಾರೆ. ನನಗೆ ಹುಡುಗಿಯರ ಟಾರ್ಗೆಟ್ ಕೊಟ್ಟಿದ್ದರು. ಅವರೇ ಹುಬ್ಬಳ್ಳಿ ಹುಡುಗಿಯ ಡಿಟೇಲ್ ಕೊಟ್ಟಿದ್ದು, ಐದು ಸಾವಿರ ಹಣ ಕೊಟ್ಟು ಕಳಿಸಿದ್ದರು' ಎಂದು ಶ್ರೀಧರ್ ಅಲಿಯಾಸ್ ಸಲ್ಮಾನ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಶ್ರೀಧರ್ ಮೇಲೆ ಹಲ್ಲೆ : ಶ್ರೀಧರ್ ಅವರು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯನ್ನು ಭೇಟಿಯಾಗಲು ಸೆ. 21ರಂದು ಹುಬ್ಬಳ್ಳಿಯ ಬೈರಿದೇವರಕೊಪ್ಪಕ್ಕೆ ಬಂದಾಗ, ಅಪರಿಚಿತರು ಅವರ ಮೇಲೆ ಹಲ್ಲೆ ನಡೆಸಿದ್ದರು. ಕಿಮ್ಸ್ನಲ್ಲಿ ಚಿಕಿತ್ಸೆ ಪಡೆದ ಅವರು, ತನ್ನನ್ನು ಮತಾಂತರ ಮಾಡಿದವರ ಕುರಿತಾಗಿ ನವನಗರ ಪೊಲೀಸ್ ಠಾಣೆಯಲ್ಲಿ ಶ್ರೀಧರ್ ದೂರು ದಾಖಲಿಸಿದ್ದಾರೆ.
12 ಜನರ ವಿರುದ್ಧ ಕೇಸ್ : ನಿನ್ನೆ ನವನಗರ ಪೊಲೀಸ್ ಠಾಣೆಯಲ್ಲಿ ಶ್ರೀಧರ್ ಅಲಿಯಾಸ್ ಸಲ್ಮಾನ್ ದೂರಿನನ್ವಯ 12 ಜನರ ವಿರುದ್ದ ಕೇಸ್ ದಾಖಲಾಗಿದೆ. ಪೊಲೀಸ್ ಠಾಣೆಯಲ್ಲಿ ಅತ್ತಾವರ್ ರೆಹಮಾನ್, ಅಜೀಸಾಬ್, ನಯಾಜ್ ಪಾಷಾ, ನದೀಮ್ ಖಾನ್, ಅನ್ಸಾರ್ ಪಾಷಾ, ಸಯ್ಯದ್ ದಸ್ತಗಿರ್, ಮಹಮ್ಮದ್ ಇಕ್ಬಾಲ್, ರಫೀಕ್, ಶಬ್ಬೀರ್, ಖಾಲಿದ್, ಷಾಕಿಲ್ ಮತ್ತು ಅಲ್ತಾಪ್ ವಿರುದ್ಧ ದೂರು ದಾಖಲಾಗಿದೆ.
ಇದನ್ನೂ ಓದಿ :ಮಂಡ್ಯದ ವ್ಯಕ್ತಿಗೆ ಬಲವಂತವಾಗಿ ಮತಾಂತರ ಯತ್ನ: ಹುಬ್ಬಳ್ಳಿಯಲ್ಲಿ 11 ಮಂದಿ ವಿರುದ್ಧ ಕೇಸ್