ಧಾರವಾಡ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಆರ್ಸಿಬಿ ಪಂದ್ಯ ಅಂದ್ರೆ ಅಲ್ಲೊಂದು ಹುಮ್ಮಸ್ಸು ಇದ್ದೇ ಇರುತ್ತದೆ. ನೆಚ್ಚಿನ ತಂಡ ಗೆದ್ದು ಬರಲಿ ಎಂದು ಪೂಜೆ, ಪುನಸ್ಕಾರ, ಹೋಮ, ಹವನಗಳನ್ನು ಮಾಡುವುದು ಸಾಮಾನ್ಯ. ಹಾಗೆ ಆರ್ಸಿಬಿ ಪಂದ್ಯ ಗೆಲುವಿಗಾಗಿ ಧಾರವಾಡದಲ್ಲಿ ವಿಶೇಷ ಪೂಜೆ ಸಲ್ಲಿಸಿದ ರಸೀದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆರ್ಸಿಬಿ ಹೆಸರಲ್ಲಿ ವಿಶೇಷ ಪೂಜೆ: ಸಾಮಾಜಿಕ ಜಾಲತಾಣದಲ್ಲಿ ಅಭಿಷೇಕದ ರಸೀದಿ ವೈರಲ್ - Royal Challengers Bangalore Fans
ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಕೊರತೆಯೇ ಇಲ್ಲ. ಹಾಗೆ ಇಂದು ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಗೆದ್ದು ಬರಲಿ ಎಂದು ಅಭಿಷೇಕ ಮಾಡಿಸಿದ್ದಾರೆ. ಆ ಅಭಿಷೇಕದ ರಸೀದಿ ವೈರಲ್ ಸಹ ಆಗಿದೆ.
ಹೌದು, ಧಾರವಾಡ ಇತಿಹಾಸ ಪ್ರಸಿದ್ಧ ನುಗ್ಗಿಕೇರಿ ಹನುಮಂತ ದೇವರಿಗೆ ಆರ್ಸಿಬಿ ಅಭಿಮಾನಿಗಳು ವಿಶೇಷ ಪೂಜೆ ಮಾಡಿಸಿದ್ದಾರೆ. ಈ ಪೂಜೆಯ ರಸೀದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯ ನಡೆಯುತ್ತಿದ್ದು, ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಲಿ ಎಂದು ಅಭಿಮಾನಿಗಳು 101 ರೂ.ಗಳ ಅಭಿಷೇಕ ಮಾಡಿಸಿದ್ದಾರೆ.
ಇನ್ನು ವಿಶೇಷ ಅಂದ್ರೆ ರಾಶಿ ಸ್ಥಳದಲ್ಲಿ ವಿರಾಟ್ ಕೊಹ್ಲಿ ಹೆಸರನ್ನು ಮತ್ತು ಗೋತ್ರದ ಸ್ಥಳದಲ್ಲಿ ಎಬಿಡಿ ಹೆಸರು ಹಾಕಲಾಗಿದೆ. RCB ಪಂದ್ಯ ಗೆಲ್ಲಲು ಧಾರವಾಡದ ನುಗ್ಗಿಕೇರಿ ಹಣಮಂತ ದೇವಸ್ಥಾನದಲ್ಲಿ ವಿಶೇಷ ಪೂಜೆಯ ರಸೀದಿ ವೈರಲ್ ಆಗಿದ್ದು, ಇದು ಸತ್ಯವೋ ಅಸತ್ಯವೋ ತಿಳಿದು ಬರಬೇಕಿದೆ. ಇನ್ನು ಎರಡೂ ಬಲಿಷ್ಠ ತಂಡಗಳಾಗಿದ್ದರಿಂದ ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಅನ್ನೋದನ್ನು ಕಾದು ನೋಡಬೇಕಿದೆ.