ಹುಬ್ಬಳ್ಳಿ:ದೀಪಾವಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ಸಲುವಾಗಿ ನೈರುತ್ಯ ರೈಲ್ವೆಯು ತಿರುಪತಿ - ಕೊಲ್ಹಾಪುರದ ಛತ್ರಪತಿ ಸಾಹು ಮಹಾರಾಜ್ ಟರ್ಮಿನಸ್ ನಡುವೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ.
ದೀಪಾವಳಿಗೆ ವಿಶೇಷ ರೈಲು ವ್ಯವಸ್ಥೆ ರೈಲು ಸಂಚಾರ ನಿನ್ನೆಯಿಂದ ಆರಂಭವಾಗಿದ್ದು, ನ. 16ರ ತನಕ ಮುಂದುವರಿಯಲಿದೆ. ನಿತ್ಯ ರಾತ್ರಿ 9 ಗಂಟೆಗೆ ತಿರುಪತಿಯಿಂದ ಹೊರಡುವ ರೈಲು ಮರುದಿನ ಮಧ್ಯಾಹ್ನ 4.35ಕ್ಕೆ ಕೊಲ್ಹಾಪುರಕ್ಕೆ ತಲುಪಲಿದೆ.
ಈ ರೈಲು ರೇಣಿಗುಂಟ, ಯರೇಗುಂಟ್ಲಾ, ತಾಡಪತ್ರಿ, ಗುಂತಕಲ್, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಘಟಪ್ರಭಾ, ರಾಯಬಾಗ, ಕುಡಚಿ, ಮೀರಜ್ ಮತ್ತು ಹಟ್ಕಾನಂಗಲೆ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಅ. 30ರಿಂದ ನ. 18ರ ತನಕ ಇನ್ನೊಂದು ರೈಲು ಇದೇ ಮಾರ್ಗವಾಗಿ ಕೊಲ್ಹಾಪುರದಿಂದ ತಿರುಪತಿಗೆ ತೆರಳಲಿದೆ. ಬೆಳಿಗ್ಗೆ 11.30ಕ್ಕೆ ಕೊಲ್ಹಾಪುರದಿಂದ ಹೊರಟು ಮರುದಿನ ಬೆಳಿಗ್ಗೆ 8 ಗಂಟೆಗೆ ತಿರುಪತಿಗೆ ತಲುಪಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.