ಹುಬ್ಬಳ್ಳಿ:ಕರ್ನಾಟಕ ಸರ್ಕಾರದ ಕೋರಿಕೆ ಮೇರೆಗೆ ಹುಬ್ಬಳ್ಳಿ ನೈಋತ್ಯ ರೈಲ್ವೆ ವಲಯದ ವಿಭಾಗೀಯ ಕಚೇರಿಯು ಉತ್ತರ ಪ್ರದೇಶಕ್ಕೆ ಶ್ರಮಿಕ ಎಕ್ಸಪ್ರೆಸ್ ವಿಶೇಷ ರೈಲು ವ್ಯವಸ್ಥೆ ಮಾಡಿದೆ.
ಇಂದು ಮತ್ತು ನಾಳೆ ಹುಬ್ಬಳ್ಳಿಯಿಂದ ಉತ್ತರ ಪ್ರದೇಶದ ಲಕ್ನೋ ಮಾರ್ಗವಾಗಿ ಬಸ್ತಿ ಹಾಗೂ ಅಜಮ್‍ಘಡಕ್ಕೆ ರೈಲುಗಳು ತೆರಳಲಿವೆ. ಈ ರೈಲುಗಳ ಮೂಲಕ ತೆರಳಲು ಬಯಸುವ ಪ್ರಯಾಣಿಕರು ಮುಂಚಿತವಾಗಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕು. ಹಾಗೆಯೇ ಟಿಕೆಟ್ ಪಡೆಯಲು ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದಲ್ಲಿ ಕೌಂಟರ್ ಸ್ಥಾಪಿಸಲಾಗಿದೆ.
ಬಸ್ ನಿಲ್ದಾಣದಲ್ಲಿಯೇ ಪ್ರಯಾಣಿಕರಿಗೆ ಸ್ಕ್ರೀನಿಂಗ್ ಹಾಗೂ ವೈದ್ಯಕೀಯ ತಪಾಸಣೆ ನಡೆಸಲಾಗುವುದು. ನಂತರ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ವಾ.ಕ.ರ.ಸಾ.ಸಂಸ್ಥೆ ಬಸ್‍ಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲಾಗುವುದು. ಧಾರವಾಡ ಜಿಲ್ಲೆಯಿಂದ ಉತ್ತರ ಪ್ರದೇಶಕ್ಕೆ ತೆರಳಲು 952 ಜನರು ಈಗಾಗಳಲೇ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಇಂದು ಬಿಹಾರಕ್ಕೆ ರೈಲು ಇಲ್ಲ:
ಈ ಹಿಂದೆ ನೀಡಿದ್ದ ವೇಳಾಪಟ್ಟಿಯ ಪ್ರಕಾರ ಇಂದು ಬಿಹಾರದ ಕಟಿಹಾರ್ಗೆ ತೆರಳಬೇಕಿದ್ದ ರೈಲು ರದ್ದಾಗಿದೆ. ಈ ರೈಲು ಬಿಹಾರಕ್ಕೆ ಹೊರಡುವ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.