ಹುಬ್ಬಳ್ಳಿ : ಸದ್ಯಕ್ಕೆ ಕೊರೊನಾ ಮಹಾಮಾರಿ ವಿರುದ್ಧ ನಿರಂತರ ಹೋರಾಟ ನಡೆಸುವ ಅನಿವಾರ್ಯತೆ ಉಂಟಾಗಿದೆ. ಹೀಗಾಗಿ ಧಾರವಾಡ ಜಿಲ್ಲಾಡಳಿತ ಕೊರೊನಾ ಸೋಂಕಿತರನ್ನು ಮಾನಸಿಕವಾಗಿ ಸದೃಢರನ್ನಾಗಿ ಮಾಡುವ ಕೆಲಸಕ್ಕೆ ಮುಂದಾಗಿದೆ.
ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ವಿಶೇಷ ಕ್ರೀಡಾ ವ್ಯವಸ್ಥೆ - ಹುಬ್ಬಳ್ಳಿ-ಧಾರವಾಡ ಕೋವಿಡ್ ಕೇರ್ ಸೆಂಟರ್
ಹುಬ್ಬಳ್ಳಿ- ಧಾರವಾಡದ ವಿವಿಧ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ವಿಶೇಷ ಕ್ರೀಡೆಗಳ ವ್ಯವಸ್ಥೆ ಮಾಡಲಾಗಿದೆ.
![ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ವಿಶೇಷ ಕ್ರೀಡಾ ವ್ಯವಸ್ಥೆ Hubli](https://etvbharatimages.akamaized.net/etvbharat/prod-images/768-512-10:38:27:1595221707-kn-hbl-01-corona-sports-av-7208089-20072020103652-2007f-1595221612-199.jpg)
ನಗರದ ವಿವಿಧ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ವಿಶೇಷ ಕ್ರೀಡೆಗಳ ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿಯ ಅಂಚಟಗೇರಿ, ಘಂಟಿಕೇರಿ ಸೇರಿದಂತೆ ವಿವಿಧ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಸೋಂಕಿತರಿಗೆ ವಿಶೇಷ ಆಟಗಳನ್ನು ಆಡಿಸುವ ಮೂಲಕ ಸೋಂಕಿತರನ್ನು ಮನರಂಜನೆಯತ್ತ ಕೊಂಡೊಯ್ಯುವ ಕಾರ್ಯ ಮಾಡಲಾಗುತ್ತಿದೆ.
ಸೋಂಕಿತರಿಗೆ ನಿತ್ಯ ವ್ಯಾಯಾಮದ ಜೊತೆಗೆ ಲಾಪಿಂಗ್ ಕ್ಲಬ್, ಕೇರಂ, ಚೆಸ್ ಆಟಗಳನ್ನು ಆಡಿಸುವ ಮೂಲಕ ಕೋವಿಡ್ ಬಗ್ಗೆ ಹೆಚ್ಚು ಗಮನ ಹರಿಸದೇ ಮನೋತ್ಸಾಹ ಮೂಡುವ ಹಾಗೆ ಮಾಡಲು ಜಿಲ್ಲಾಡಳಿತ ಹೊಸ ಯೋಜನೆ ರೂಪಿಸಿದೆ. ಇದರಿಂದ ತಾವು ಕೋವಿಡ್ ಸೋಂಕಿತರು ಎನ್ನುವ ಭಾವನೆ ಕಡಿಮೆಯಾಗಿ ಬೇಗ ಗುಣಮುಖರನ್ನಾಗಿ ಮಾಡುವ ಪ್ರಯತ್ನ ನಡೆಸಿದ್ದು, ಸೋಂಕಿತರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.