ಧಾರವಾಡ:ರಾಜ್ಯ ಸರ್ಕಾರವು ವಿಶೇಷ ಯೋಜನೆಗಳ ಮೂಲಕ ರೈತರ ಮತ್ತು ಕೃಷಿ ಕೂಲಿ ಕಾರ್ಮಿಕರ ಅಭಿವೃದ್ಧಿಗೆ ನಿರಂತರ ಪ್ರಯತ್ನ ಮಾಡುತ್ತಿದೆ. ಅನುದಾನ, ಶಿಷ್ಯವೇತನ, ಪರಿಹಾರಗಳ ಮೂಲಕ ರೈತರಿಗೆ ಶಕ್ತಿ ತುಂಬಲಾಗುತ್ತಿದೆ. ಈಗ ರೈತ ಶಕ್ತಿ ಎಂಬ ನೂತನ ಯೋಜನೆಯೊಂದಿಗೆ ಕೃಷಿ ಮತ್ತು ಕೃಷಿಕರ ಅಭಿವೃದ್ಧಿಗೆ ಸರ್ಕಾರವು ಶ್ರಮಿಸುತ್ತಿದ್ದು, ರೈತರ ಅಭಿವೃದ್ಧಿಗೆ ಬದ್ಧವಾಗಿದೆ. ಬರುವ ಬಜೆಟ್‍ನಲ್ಲಿ ರೈತರಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ಜರುಗಿದ ನೂತನ ಯೋಜನೆಗಳ ಚಾಲನಾ ಕಾರ್ಯಕ್ರಮ ಹಾಗೂ ಕೃಷಿ ಪಂಡಿತ, ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ರಾಜ್ಯ ಸರ್ಕಾರವು ರೈತ ಶಕ್ತಿ ಯೋಜನೆ ಮೂಲಕ ರಾಜ್ಯದ ಎಲ್ಲಾ ವರ್ಗದ ರೈತರಿಗೆ ಪ್ರತಿ ಎಕರೆಗೆ ರೂ.250 ಗಳಂತೆ ಗರಿಷ್ಠ 5 ಎಕರೆಗೆ ರೂ.1250 ಗಳನ್ನು ಕೃಷಿ ಯಂತ್ರೋಪಕರಣಗಳ ಬಳಕೆಯ ಪ್ರೋತ್ಸಾಹಕ್ಕೆ ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿತಗೊಳಿಸಲು ಡೀಸೆಲ್‍ಗೆ 51.80 ಲಕ್ಷ ಫಲಾನುಭವಿಗಳಿಗೆ ರೂ.390 ಕೋಟಿಗಳ ಸಹಾಯಧನವನ್ನು ಆನ್‍ಲೈನ್ ಡಿಬಿಟಿ ಮೂಲಕ ಜಮೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ರೈತರ, ಕೃಷಿ ಕಾರ್ಮಿಕರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು 8 ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ಹಾಗೂ 10ನೇ ತರಗತಿ ನಂತರದ ಶಿಕ್ಷಣಕ್ಕೆ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ರೂ.2,500 ರಿಂದ ರೂ.11,000 ಗಳ ವರೆಗೆ ಒಟ್ಟು 11 ಲಕ್ಷ ರೈತ ಮಕ್ಕಳಿಗೆ ರೂ.488 ಕೋಟಿ ರೂ.ಗಳನ್ನು ವಿದ್ಯಾರ್ಥಿ ವೇತನದ ನೇರ ನಗದು ವರ್ಗಾವಣೆ ಮಾಡಲಾಗಿದೆ. ಮತ್ತು ಈ ಯೋಜನೆಗಾಗಿ ಒಟ್ಟು 500 ಕೋಟಿ ರೂ. ಮೀಸಲಿಡಲಾಗಿದೆ ಎಂದು ಸಿಎಂ ವಿವರಿಸಿದರು.
ಈಗಾಗಲೇ 14 ಲಕ್ಷ ರೈತರಿಗೆ 1,900 ಕೋಟಿ ರೂ.ಗಳ ಬೆಳೆಹಾನಿ ಪರಿಹಾರವನ್ನು ನೀಡಲಾಗಿದೆ. ಈ ಹಿಂದಿನ ಸರ್ಕಾರಗಳ ಪರಿಹಾರಕ್ಕಿಂತ ಹೆಚ್ಚಿನ ಮೊತ್ತವನ್ನು ಪ್ರಸ್ತುತ ನಮ್ಮ ಸರ್ಕಾರ ನೀಡುತ್ತಿದೆ. ಕೃಷಿ ವಲಯದ ಅಭಿವೃದ್ಧಿ ಮತ್ತು ಕೃಷಿಕರ ನೆರವಿಗಾಗಿ ಹಲವಾರು ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಬಡ ರೈತರ, ಕೃಷಿ ಕೂಲಿ ಕಾರ್ಮಿಕರ ಮತ್ತು ಅವರ ಮಕ್ಕಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.