ಚಿಕ್ಕೋಡಿ, ಹುಬ್ಬಳ್ಳಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ತರ ಸಾಧನೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಇಸ್ರೋ ಕೈಗೊಂಡಿರುವ ಅತ್ಯಂತ ಮಹತ್ವಾಕಾಂಕ್ಷೆಯ ಚಂದ್ರಯಾನ 3 ಯಶಸ್ಸಿಗೆ ಎಲ್ಲೆಡೆಯಿಂದ ಶುಭ ಹಾರೈಕೆಗಳು ಹರಿದು ಬರುತ್ತಿದೆ. ದೇಶ ಮಾತ್ರವಲ್ಲದೇ ಜಗತ್ತಿನಾದ್ಯಂತ ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್ ಆಗಲೆಂದು ದೇಶಾದ್ಯಂತ ಧಾರ್ಮಿಕ ಕೇಂದ್ರಗಳಲ್ಲಿ ಹೋಮ, ಹವನ, ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಕೆ ಮಾಡಲಾಗುತ್ತಿದೆ.
ಚಿಕ್ಕೋಡಿ: ಹುಕ್ಕೇರಿ ಹಿರೇಮಠದಲ್ಲಿ 108 ವೇದಪಟುಗಳು ರುದ್ರ ಹಾಗೂ ಗಣ ಹೋಮ, ಪೂಜೆ ಸಲ್ಲಿಸಿ ಚಂದ್ರಯಾನ 3ರ ಯಶಸ್ವಿಗೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಯಾಗ ಶಾಲೆಯಲ್ಲಿ ಹೋಮ ಆಯೋಜನೆ ಮಾಡಲಾಗಿತ್ತು. ವೇದ ಗುರುಗಳಾದ ಉದಯ ಶಾಸ್ತ್ರಿಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಹೋಮ ಹವನದ ಎದುರು ಭಾರತ ರಾಷ್ಟ್ರ ಧ್ವಜವನ್ನು ಹಿಡಿದು ಮಂತ್ರ ಘೋಷಗಳೊಂದಿಗೆ ದೇಶಕ್ಕೆ ಒಳಿತಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಇದೇ ವೇಳೆ, ಹುಕ್ಕೇರಿ ಶ್ರೀಗಳಾದ ಚಂದ್ರಶೇಖರ್ ಶಿವಾಚಾರ್ಯಗಳು ಮಾತನಾಡಿ, ’’ಭಾರತದ ಹೆಮ್ಮೆಯ ಚಂದ್ರಯಾನ 3ರ ಯಶಸ್ಸಿಗೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. ಇಷ್ಟಲಿಂಗಕ್ಕೆ ರುದ್ರಾಭಿಷೇಕ ಸಲ್ಲಿಸಲಾಯಿತು. ಇಸ್ರೋ ವಿಜ್ಞಾನಿಗಳ ಸತತ ಪರಿಶ್ರಮಕ್ಕೆ ಯಶಸ್ವಿ ಸಿಗಲೆಂದು ದೇವರಲ್ಲಿ ಪ್ರಾರ್ಥನೆ ಕೂಡ ಸಲ್ಲಿಸಲಾಗಿದೆ. ಶ್ರೀಮಠದಲ್ಲಿ 108 ವೇದಪಟುಗಳಿಂದ ರುದ್ರಯಾಗವನ್ನು ನೆರವೇರಿಸಲಾಗಿದೆ. ಇದು ಭಾರತದ ಹೆಮ್ಮೆಯ ಚಂದ್ರಯಾನವಾಗಿದ್ದು, ಯಶಸ್ವಿಯಾಗಲಿ ಎಂದು ನಾವು ಶುಭ ಹಾರೈಸುತ್ತೇವೆ’’ ಎಂದು ತಿಳಿಸಿದರು.