ಹುಬ್ಬಳ್ಳಿ:ಶೀಗಿ ಹುಣ್ಣಿಮೆ ಪ್ರಯುಕ್ತ ಅ. 20 ರಂದು ಬುಧವಾರ ಹುಬ್ಬಳ್ಳಿಯಿಂದ ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಸರಣಿ ರಜೆ ಮುಗಿಸಿ ಹಿಂದಿರುಗುವವರಿಗಾಗಿ ಹುಬ್ಬಳ್ಳಿಯಿಂದ ವಿವಿಧ ಸ್ಥಳಗಳಿಗೆ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಾಯವ್ಯ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡ ತಿಳಿಸಿದ್ದಾರೆ.
ಕೋವಿಡ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ರೇಣುಕಾ ಯಲ್ಲಮ್ಮ ದೇವಸ್ಥಾನ ಸೇರಿದಂತೆ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಇದೀಗ ನಿರ್ಬಂಧಗಳನ್ನು ಸಡಿಲಿಸಲಾಗಿದ್ದು, ಸೌದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ದರ್ಶನ ಮತ್ತು ಸೇವೆಗಳಿಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಶೀಗಿ ಹುಣ್ಣಿಮೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ಬೇಡಿಕೆ ಮೇರೆಗೆ ಅ.20 ರಂದು ಬೆಳಗ್ಗೆಯಿಂದ ಹುಬ್ಬಳ್ಳಿಯಿಂದ ಯಲ್ಲಮ್ಮಗುಡ್ಡಕ್ಕೆ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಭಕ್ತಾಧಿಗಳ ಅನುಕೂಲಕ್ಕಾಗಿ ನಗರದ ಹಳೆ ಬಸ್ ನಿಲ್ದಾಣ ಮತ್ತು ಹೊಸೂರು ಬಸ್ ನಿಲ್ದಾಣ ಎರಡೂ ಸ್ಥಳಗಳಿಂದ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.
ರಜೆ ಮುಗಿಸಿ ಹಿಂದಿರುಗುವವರಿಗೆ ಹೆಚ್ಚುವರಿ ಬಸ್ :
ಆಯುಧ ಪೂಜೆ, ವಿಜಯದಶಮಿ, ಭಾನುವಾರ, ಈದ ಮಿಲಾದ್, ವಾಲ್ಮಿಕಿ ಜಯಂತಿ ಮತ್ತಿತರ ಸರಣಿ ರಜೆ ಪ್ರಯುಕ್ತ ದೂರದೂರುಗಳಲ್ಲಿ ನೆಲೆಸಿದ್ದ ಸಾವಿರಾರು ಜನರು ತವರೂರಿಗೆ ಆಗಮಿಸಿದ್ದರು. ರಜೆ ಮುಗಿಸಿ ನಗರದಿಂದ ತೆರಳುವ ಅವರ ಅನುಕೂಲಕ್ಕಾಗಿ ಅ. 20 ರಂದು ಬುಧವಾರ ಹುಬ್ಬಳ್ಳಿಯಿಂದ ಬೆಂಗಳೂರು ಮತ್ತಿತರ ವಿವಿಧ ಸ್ಥಳಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ನಿತ್ಯದ ಬಸ್ಗಳೊಂದಿಗೆ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಹೆಚ್ಚುವರಿಯಾಗಿ ವೇಗದೂತ, ರಾಜಹಂಸ, ಸ್ಲೀಪರ್ ಹಾಗೂ ವೋಲ್ವೋ ಬಸ್ಗಳನ್ನು ರಸ್ತೆಗಿಳಿಸಲಾಗುತ್ತದೆ.
ಗದಗ, ಕೊಪ್ಪಳ, ರಾಯಚೂರು, ಕಲಬುರಗಿ, ಸೊಲ್ಲಾಪುರ, ನವಲಗುಂದ, ನರಗುಂದ ಇಳಕಲ್, ಬದಾಮಿ,ಗುಳೇದಗುಡ್ಡ, ಬಾಗಲಕೋಟೆ, ವಿಜಯಪುರ ಕಡೆಗೆ ಹೋಗುವ ವೇಗದೂತ ಬಸ್ಗಳು ಹಾಗೂ ಎಲ್ಲ ಗ್ರಾಮೀಣ ಬಸ್ ಗಳು ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ.
ಬೆಳಗಾವಿ, ನಿಪ್ಪಾಣಿ, ಕೊಲ್ಲಾಪುರ, ಪುಣೆ, ಪಿಂಪ್ರಿ, ಶಿರಡಿ, ಮುಂಬೈ, ಗೋಕಾಕ್, ರಾಮದುರ್ಗ, ಚಿಕ್ಕೋಡಿ, ಸಂಕೇಶ್ವರ, ಪಣಜಿ, ವಾಸ್ಕೋ, ಮಡಗಾಂವ, ಶಿರಸಿ, ಕುಮಟಾ, ಮಂಗಳೂರು, ಧರ್ಮಸ್ಥಳ,ಅಂಕೋಲ, ಯಲ್ಲಾಪುರ, ಕಾರವಾರ, ದಾವಣಗೆರೆ, ಶಿವಮೊಗ್ಗ, ಮೈಸೂರು, ಬೆಂಗಳೂರು, ತಿರುಪತಿ, ಹೈದರಾಬಾದ್ ಮತ್ತಿತರ ಕಡೆಗೆ ಹೋಗುವ ವೇಗದೂತ ಸಾರಿಗೆಗಳು ಹಾಗೂ ಎಲ್ಲಾ ಪ್ರತಿಷ್ಟಿತ ಸಾರಿಗೆ ಬಸ್ಗಳು ಗೋಕುಲ್ ರಸ್ತೆಯ ಹೊಸ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಾಕರಸಾ ಸಂಸ್ಥೆ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡ ತಿಳಿಸಿದ್ದಾರೆ.