ಹುಬ್ಬಳ್ಳಿ: ನೈರುತ್ಯ ರೈಲ್ವೆಯು 2022- 23ರಲ್ಲಿ ಅತ್ಯುತ್ತಮ ಗಳಿಕೆ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ರೈಲು ಪ್ರಯಾಣ ದರ, ಸರಕು ಸಾಗಣೆ ಸೇರಿದಂತೆ ನಾನಾ ಸೇವೆಗಳ ಮೂಲಕ ಒಟ್ಟಾರೆ 8,071 ಕೋಟಿ ರೂ. ಆದಾಯ ಸಂಗ್ರಹಿಸಿದೆ. 2003 ರಲ್ಲಿ ನೈರುತ್ಯ ರೈಲ್ವೆ ವಲಯ ಸ್ಥಾಪನೆಗೊಂಡಾಗಿನಿಂದಲೂ ಇಷ್ಟೊಂದು ಗಳಿಕೆ ಮಾಡಿರಲಿಲ್ಲ. ಆದ್ರೆ, ಈ ಬಾರಿ ಅತ್ಯಧಿಕ ಒಟ್ಟು ಆದಾಯ 8,071 ಕೋಟಿ ರೂ. ಲಭಿಸಿದೆ. (ಪ್ರಯಾಣಿಕರಿಂದ- 2,756 ಕೋಟಿ ರೂ., ಸರಕು ಸಾಗಣೆಯಿಂದ - 4,696 ಕೋಟಿ ರೂ., ವಿವಿಧ ಮೂಲಗಳಿಂದ - 348 ಕೋಟಿ ರೂ. ಮತ್ತು ಇತರೆ ಮೂಲಗಳಿಂದ (ಕೋಚಿಂಗ್) ರೂ. 271 ಕೋಟಿ). ಇದೇ ಮೊದಲ ಬಾರಿಗೆ ಒಟ್ಟು ಆದಾಯವು 8,000 ಕೋಟಿ ರೂ. ದಾಟಿದೆ. 2022-23ರಲ್ಲಿನ ಒಟ್ಟು ಆದಾಯವು 2021-22 ರಲ್ಲಿ ದಾಖಲಾದ ಶೇ.30 ಕ್ಕಿಂತ ಹೆಚ್ಚಾಗಿದೆ.
ನೈರುತ್ಯ ರೈಲ್ವೆ ವಲಯವು 2007- 08ರಲ್ಲಿ ದಾಖಲಿಸಿದ್ದ 46.24 ಮಿಲಿಯನ್ ಟನ್‌ಗಳ ಹಿಂದಿನ ದಾಖಲೆ ಮೀರಿ, 2022- 23ರಲ್ಲಿ 47.7 ಮಿಲಿಯನ್ ಟನ್‌ಗಳ ಸರಕು ಸಾಗಿಸಿದೆ. ವಲಯದ ಮೂರು ವಿಭಾಗಗಳ ವ್ಯಾಪ್ತಿಯಲ್ಲಿ ಗ್ರಾಹಕರ ಕೇಂದ್ರಿತ ವ್ಯಾಪಾರ ಅಭಿವೃದ್ಧಿ ಘಟಕಗಳ (Business Development Units) ಸ್ಥಾಪನೆ ಹಾಗೂ ರೈಲ್ವೆ ಯೋಜನೆ ಮತ್ತು ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡುವ ಸಂಘಟಿತ ಪ್ರಯತ್ನದ ಫಲಗಳಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ.
ಆಟೋಮೊಬೈಲ್ ಉದ್ಯಮಿಗಳಿಗೆ ರೈಲ್ವೆಯು ಸುರಕ್ಷಿತ, ಸಕಾಲಿಕ, ಹಾನಿ ರಹಿತ, ವಿಶ್ವಾಸಾರ್ಹ ಮತ್ತು ಪರಿಸರ ಸ್ನೇಹಿ 'ಆಯ್ಕೆಯ ಸಾರಿಗೆ' ಆಗಿ ಹೊರಹೊಮ್ಮಿದೆ. ನೈರುತ್ಯ ರೈಲ್ವೆಯು ಕಳೆದ ವರ್ಷ 238 ರೇಕ್, 2022- 23 ರಲ್ಲಿ 509 ರೇಕ್‌ಗಳಲ್ಲಿ (ರೇಕ್= ಗೂಡ್ಸ್ ರೈಲು) ಆಟೋಮೊಬೈಲ್‌ಗಳಿಗೆ ಸಂಬಂಧಿಸಿದ ವಸ್ತುಗಳನ್ನು ಸಾಗಿಸುವ ಜೊತೆಗೆ ಖನಿಜ ತೈಲ (2.05 ಮೆಟ್ರಿಕ್ ಟನ್), ಸಿಮೆಂಟ್ (1.07 ಮೆಟ್ರಿಕ್ ಟನ್) ಮತ್ತು ಸಕ್ಕರೆ (1.45 ಮೆಟ್ರಿಕ್ ಟನ್) ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಲೋಡಿಂಗ್ ಮಾಡಲಾಗಿದೆ.
ಪ್ರಯಾಣಿಕರ ಬೇಡಿಕೆಯ ಮೇರೆಗೆ ಹಬ್ಬ ಹರಿದಿನ, ರಜಾ ದಿನ ಮತ್ತು ಇತರೆ ವಿಶೇಷ ಸಂದರ್ಭಗಳಲ್ಲಿ ವಿಶೇಷ ರೈಲುಗಳನ್ನು ಓಡಿಸಲಾಗಿದೆ. 253 ಹೆಚ್ಚುವರಿ ಬೋಗಿಗಳನ್ನು ಶಾಶ್ವತ ಮತ್ತು 224 ಬೋಗಿಗಳನ್ನು ತಾತ್ಕಾಲಿಕ ಆಧಾರದ ಮೇಲೆ ಜೋಡಿಸಲಾಗಿದೆ. ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರ ಅನುಕೂಲಕ್ಕಾಗಿ ವರ್ಷದಲ್ಲಿ 2,335 ಹೆಚ್ಚುವರಿ ಬೋಗಿಗಳನ್ನು ಒದಗಿಸಿದೆ. ನಾಲ್ಕು ಹೊಸ ರೈಲು, ಎರಡು ರೈಲುಗಳ ವಿಸ್ತರಣೆ ಹಾಗೂ ಎರಡು ರೈಲುಗಳ ಸೇವೆಯನ್ನು ಆವರ್ತನೆ (frequency) ಗೆ ಹೆಚ್ಚಿಸಲಾಯಿತು. 116 ರೈಲುಗಳ ವೇಗವನ್ನು ಹೆಚ್ಚಿಸುವ ಮೂಲಕ 2,816 ನಿಮಿಷಗಳ ಪ್ರಯಾಣದ ಸಮಯ ಉಳಿಸಿದಂತಾಗಿದೆ. 6 ಜೋಡಿ ರೈಲುಗಳನ್ನು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಹಾಗೂ ಸೌಕರ್ಯ ಒದಗಿಸುವ ಸಲುವಾಗಿ 10 ರೈಲುಗಳನ್ನು ಸಾಂಪ್ರದಾಯಿಕ ICF ಬೋಗಿಗಳಿಂದ LHB ಬೋಗಿಗಳಾಗಿ ಮಾರ್ಪಾಡು ಮಾಡಲಾಗಿದೆ. ಪ್ರಯಾಣಿಕರ ವಿನಂತಿ ಮೇರೆಗೆ ಒಟ್ಟು 13 FTR ರೈಲು ಸೇವೆಗಳು (Full Tariff Rate/ ಒಪ್ಪಂದದ ಮೇರೆಗೆ ರೈಲು ಸೇವೆ), ವಿಶೇಷ ರೈಲುಗಳಿಗೆ 49 FTR ಬೋಗಿಗಳನ್ನು ಜೋಡಿಸುವ ಮೂಲಕ ಓಡಿಸಲಾಗಿದೆ.