ಹುಬ್ಬಳ್ಳಿ:ಪ್ರತಿಯೊಬ್ಬ ತಂದೆ, ತಾಯಿಯಲ್ಲಿಯೂ ತಮ್ಮ ಮಕ್ಕಳು ಬೆಳೆದು ದೊಡ್ಡವರಾಗಿ ಮುಪ್ಪಿನ ಕಾಲಕ್ಕೆ ಆಸರೆಯಾಗುತ್ತಾರೆ ಎಂಬ ಬೆಟ್ಟದಷ್ಟು ಆಸೆಗಳಿರುತ್ತವೆ. ಆದ್ರೆ ಇಲ್ಲೊಬ್ಬ ಮಗ, ಪೋಷಕರ ಆಸೆ ಹುಸಿ ಮಾಡಿದ್ದಾನೆ. ತಾವೇ ಹೊತ್ತು ಹೆತ್ತ ತಂದೆ, ತಾಯಿಯನ್ನು ಮನೆಯಿಂದ ಹೊರ ಹಾಕಿ ಅಮಾನವೀಯವಾಗಿ ನಡೆದು ಕೊಂಡಿದ್ದಾನೆ.
ತಂದೆಗೆ ಪಾರ್ಶ್ವವಾಯು, ತಾಯಿಗೆ ಕ್ಯಾನ್ಸರ್: ನಡುನೀರಲ್ಲಿ ಕೈಬಿಟ್ಟ ಪುತ್ರ - ವೃದ್ಧರ ನಿರ್ಲಕ್ಷ್ಯ
ಅನಾರೋಗ್ಯ ಪೀಡಿತ ವೃದ್ಧ ತಂದೆ ತಾಯಿಯನ್ನ ಮಗ ಮನೆಯಿಂದ ಹೊರದಬ್ಬಿರುವ ಅಮಾನವೀಯ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ವಾಣಿಜ್ಯನಗರಿ ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿರುವ ಮೋತಿಲಾಲ್ ಸಾ ಬಾಕಳೆ ದಂಪತಿ ಅನಾರೋಗ್ಯದಿಂದ ಬಳಲುತ್ತಿರುವ ವೃದ್ಧ ಜೀವಗಳು. ಪತಿ ಮೋತಿಲಾಲ್ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದು, ಪತ್ನಿ ಕ್ಯಾನ್ಸರ್ ಪೀಡಿತರಾಗಿದ್ದಾರೆ. ಇಂತಹ ದಯನೀಯ ಪರಿಸ್ಥಿತಿಯಲ್ಲಿಯೂ ಪುತ್ರ ಶ್ರೀನಿವಾಸ ಬಾಕಳೆ ಹಡೆದವರ ಅಳಲನ್ನಾಲಿಸದೇ ತುತ್ತು ಅನ್ನಕ್ಕೂ ಹಾಹಾಕಾರ ಪಡುವಂತೆ ಮಾಡಿದ್ದಾನೆ.
ಮನೆಯಿಂದ ಹೊರಬಿದ್ದ ಮೇಲೆ ಬೇರೆ ಕಡೆಗೆ ಹೋಗಲು ದಿಕ್ಕು ತೋಚದ ವೃದ್ಧ ಜೀವಗಳು ಜೀವನದ ಸಂಧ್ಯಾಕಾಲದಲ್ಲಿ ಕಣ್ಣೀರು ಹಾಕುತ್ತಿವೆ. ಒಂದೆಡೆ ಕಿತ್ತು ತಿನ್ನುವ ಬಡತನವಿದ್ದರೆ ಮತ್ತೊಂದೆಡೆ, ಅನಾರೋಗ್ಯ ಬಿಡದೇ ಕಾಡುತ್ತಿದೆ. ಮಗ ಕೊಡುವ ನೋವಿನಿಂದ ಸಂಕಷ್ಟದ ಸುಳಿಯಲ್ಲಿ ಹಿರಿ ಜೀವಗಳು ಸಿಲುಕಿಕೊಂಡಿವೆ.