ಹುಬ್ಬಳ್ಳಿ : ನಗರದಲ್ಲಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ಭಾರತೀಯ ಸೇನೆಯ ಯೋಧರೊಬ್ಬರು ನೆರವಿಗೆ ನಿಂತಿದ್ದು, ದೇಶ ರಕ್ಷಣೆಯ ಜೊತೆಗೆ ಸಮಾಜ ಸೇವೆ ಮಾಡಿ ಗಮನ ಸೆಳೆಯುತ್ತಿದ್ದಾರೆ.
ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿರುವ ಪರಶುರಾಮ್ ದಿವಾನದ್ ಎಂಬ ಯೋಧ, ಕೊರೊನಾ ಸಂತ್ರಸ್ತರಿಗೆ ತಮ್ಮ ಸ್ವಂತ ಹಣದಿಂದ ಸಹಾಯ ಮಾಡುತ್ತಿದ್ದಾರೆ. ಮನೆ ಮನೆಗೆ ಭೇಟಿ ನೀಡಿ, ಉಚಿತ ಮಾಸ್ಕ್ ಮತ್ತು ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ.
ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಪರಶುರಾಮ್ ದಿವಾನದ್, ತಮ್ಮ ಸ್ನೇಹಿತರ ಮೂಲಕ ತವರು ನೆಲದ ಜನರ ಸೇವೆ ಮಾಡುತ್ತಿದ್ದಾರೆ. ಯೋಧ ಪರಶುರಾಮ್ ನಿರ್ದೇಶನದಂತೆ ಅವರ ಎಲ್ಲಾ ಸ್ನೇಹಿತರ ಬಳಗ, ಬಡವರು ಮತ್ತು ನಿರ್ಗತಿಕರ ನೆರವಿಗೆ ನಿಂತಿದೆ. ಯೋಧ ತನ್ನ ಸ್ವಂತ ಖರ್ಚಿನಲ್ಲಿಯೇ ಇಪ್ಪತ್ತು ಸಾವಿರ ಮಾಸ್ಕ್ ಮತ್ತು ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ಪೂರೈಕೆ ಮಾಡುತ್ತಿದ್ದಾರೆ.
ಪರಶುರಾಮ್, ಖಾದಿ ಮಾಸ್ಕ್ಗಳಿಗೆ ಆದ್ಯತೆ ನೀಡುವ ಮೂಲಕ ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ಕಂಗೆಟ್ಟಿದ್ದ ಖಾದಿ ಗ್ರಾಮೋದ್ಯೋಗದ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಬಟ್ಟೆ ಹೊಲೆಯುವ ಮಹಿಳೆಯರಿಗೆ ಮಾಸ್ಕ್ ಸಿದ್ಧಪಡಿಸಲು ತಿಳಿಸಿ ಸಂಬಳ ನೀಡುತ್ತಿದ್ದಾರೆ. ಈ ಮೂಲಕ ಉದ್ಯೋಗ ಸೃಷ್ಟಿಯ ಜೊತೆಗೆ ಬಡವರ ಸಹಾಯಕ್ಕೆ ನಿಂತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.