ಹುಬ್ಬಳ್ಳಿ: ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್‌ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೈಋತ್ಯ ರೈಲ್ವೆ ವಲಯವು ಇದೀಗ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ರೈಲ್ವೆ ನಿಲ್ದಾಣ, ಸರ್ವಿಸ್ ಬಿಲ್ಡಿಂಗ್ ಸೇರಿದಂತೆ ಇತರೆಡೆ ಸೌರ ಫಲಕಗಳನ್ನು ಅಳವಡಿಸಲು ವಲಯದ ಅಧಿಕಾರಿಗಳು ಮುಂದಾಗಿದ್ದಾರೆ. ಇದರಿಂದಾಗಿ ರೈಲು ನಿಲ್ದಾಣ ಹಾಗೂ ಇತರೆ ಕಟ್ಟಡಗಳಿಗೆ ಅನಗತ್ಯ ವಿದ್ಯುತ್ ಕಡಿತಕ್ಕೆ ಕಡಿವಾಣ ಹಾಕುವ ಮೂಲಕ ಇಲಾಖೆಗೆ ಸಾಕಷ್ಟು ವೆಚ್ಚ ಕಡಿಮೆಯಾಗಲಿದೆ.
ರೈಲು ನಿಲ್ದಾಣಗಳಿಗೆ ಸೌರ ಫಲಕ ಅಳವಡಿಕೆ ವಲಯ ವ್ಯಾಪ್ತಿಯ ಹುಬ್ಬಳ್ಳಿ, ಕೆಎಸ್‌ಆರ್ ಬೆಂಗಳೂರು, ಮೈಸೂರು, ಯಶವಂತಪುರ, ಹೊಸಪೇಟೆ, ಗದಗ, ಬಳ್ಳಾರಿ ಸೇರಿದಂತೆ ಅನೇಕ ನಿಲ್ದಾಣಗಳ ಮೇಲ್ಛಾವಣಿಗಳಿಗೆ ಹಾಗೂ 7 ಸರ್ವಿಸ್ ಬಿಲ್ಡಿಂಗ್‌ಗಳಿಗೆ (ರೈಲು ಸೌಧ, ಹುಬ್ಬಳ್ಳಿ, ಬೆಂಗಳೂರು ಹಾಗೂ ಮೈಸೂರಿನ ವಿಭಾಗೀಯ ವ್ಯವಸ್ಥಾಪಕರ ಕಚೇರಿ, ಹುಬ್ಬಳ್ಳಿಯ ರೈಲ್ವೆ ಆಸ್ಪತ್ರೆ) ಸೌರ ಫಲಕಗಳನ್ನು ಅಳವಡಿಸಲಾಗಿದೆ.
2020-21ನೇ ಸಾಲಿನಲ್ಲಿ ರೈಲು ಸೌಧದಲ್ಲಿ 100 ಕೆಡಬ್ಲ್ಯೂಪಿ ಸೌರ ಫಲಕಗಳನ್ನು ಜೋಡಿಸಲಾಗಿದೆ. ಇದರಿಂದ 1.008 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗಲಿದ್ದು, 9.07 ಲಕ್ಷ ರೂ. ಉಳಿತಾಯವಾಗಲಿದೆ. ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕರ ಕಚೇರಿಯಲ್ಲಿ 320 ಕೆಡಬ್ಲ್ಯೂಪಿ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಇದರಿಂದ 3.42 ಲಕ್ಷ ಯುನಿಟ್ ಉತ್ಪಾದನೆಯಾಗಲಿದ್ದು, 11.37 ಲಕ್ಷ ರೂ. ಪ್ರತಿ ವರ್ಷ ಉಳಿತಾಯವಾಗಲಿದೆ.
ನೈಋತ್ಯ ರೈಲ್ವೆ ವಲಯವು 2021-22ನೇ ಸಾಲಿನಲ್ಲಿ 20 ರೈಲು ನಿಲ್ದಾಣಗಳಲ್ಲಿ ಸೌರ ಫಲಕಗಳನ್ನು ಅಳವಡಿಸುವ ಯೋಜನೆ ರೂಪಿಸಿದೆ. ಕೇಂದ್ರ ಸರ್ಕಾರದ ಯೋಜನೆಯಂತೆ 2030 ನೇ ವರ್ಷದ ಒಳಗೆ 'ಶೂನ್ಯ ವಾಯು ಮಾಲಿನ್ಯ'ದ ಉದ್ದೇಶವನ್ನು ಸಾಧಿಸಲು ನೈರುತ್ಯ ರೈಲ್ವೆ ವಲಯ ಮುಂದಾಗಿದೆ.