ಧಾರವಾಡ:ಜೆಡಿಎಸ್ ಅನ್ನು ಮಾತಿನಿಂದ ಪರಿಗಣಿಸಬಾರದು. ನಡತೆಯಿಂದ ಪರಿಗಣಿಸಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಹೇಳಿದ್ದಾರೆ. ಧಾರವಾಡದಲ್ಲಿಂದು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕುರಿತು ಮಾತನಾಡಿ ಅವರು,
"2006ರಲ್ಲಿ ಇದೇ ಹೆಚ್‌ಡಿ ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರು. ಅದರ ಪರಿಣಾಮಗಿ 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ನನ್ನ ಅಭಿಪ್ರಾಯದಲ್ಲಿ ಅವರ ಜಾತ್ಯತೀತತೆ ಎನ್ನುವುದು ನಾಮಕೇವಾಸ್ತೆ ಮಾತ್ರ" ಎಂದು ಹೇಳಿದ್ದಾರೆ.
"ಜೆಡಿಎಸ್ ಆಚರಣೆಯಲ್ಲಿ ಜಾತ್ಯತೀತತೆ ಇಲ್ಲ, ಈ ಸಲ ಕರ್ನಾಟಕ ಜನ ಜಾಗೃತ ಆಗಬೇಕು. ಈಗ ಅವರು ಶೇ.20 ಪರ್ಸಂಟ್ ಮಾಡಿದ್ದಾರೆ. ಮುಂದೆ ಲೋಕಸಭೆಯಲ್ಲಿ ಶೇ. 5 ಪರ್ಸಂಟ್ಗೆ ಇಳಿಸಬೇಕು. ಆ ಮೂಲಕ ಅವರನ್ನು ನಿರ್ನಾಮ ಮಾಡಿ ಮನೆಗೆ ಕಳುಹಿಸಬೇಕು ಎಂದು ಮನವಿ ಮಾಡಿದರು. ಕರ್ನಾಟಕದಲ್ಲಿ ಈ ಸಲ ಬಿಜೆಪಿ ಸೋಲಿಸಿದ್ದೇವೆ, ಅದೇ ಮಾದರಿಯಲ್ಲಿ ಲೋಕಸಭೆ ಚುನಾವಣೆಯಲ್ಲಿಯೂ ಆಗಬೇಕಿದೆ. ಬಿಜೆಪಿ ಮತ್ತು ಸಂಘ ಪರಿವಾರದ ಶಕ್ತಿಗಳನ್ನು ಸೋಲಿಸಬೇಕಿದೆ. ಅದಕ್ಕಾಗಿ ಮಹಾರಾಷ್ಟ್ರದಲ್ಲಿ ವಿವಿಧ ಸಂಘಟನೆಗಳಿಂದ ಜು. 22ರಂದು ಸಭೆ ನಡೆಯಲಿದೆ. ಪುಣೆಯಲ್ಲಿ ಈ ಸಭೆ ನಡೆಯಲಿದೆ" ಎಂದು ತಿಳಿಸಿದರು.
ಸಿಟಿಜನ್ ಫಾರ್ ಡೆಮಾಕ್ರಸಿ ಮತ್ತು ಜನಾಂದೋಲನ ಮಹಾಮೈತ್ರಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಇದಕ್ಕೆ ಮಹಾರಾಷ್ಟ್ರ ನಾಗರಿಕ ಸಮಾಜ ಸಂಘಟನೆಗಳ ಬೆಂಬಲ ನೀಡುತ್ತಿವೆ. ಅದಾದ ಬಳಿಕ ಆಗಸ್ಟ್ 5 ಮತ್ತು 6 ರಂದು ದೆಹಲಿಯಲ್ಲಿ ರಾಷ್ಟ್ರೀಯ ಸಮ್ಮೇಳನ ಮಾಡುತ್ತೇವೆ. ನವದೆಹಲಿಯ ಗಾಂಧಿ ಪೀಸ್ ಫೌಂಡೇಶನ್‌ನಲ್ಲಿ ಸಮ್ಮೇಳನ ನಡೆಯಲಿದೆ. ಬಿಜೆಪಿ ಸೋಲಿಸುವುದೇ ಈ ಸಮ್ಮೇಳನದ ಗುರಿ, ಬಿಜೆಪಿ ಸೋಲಿಸುವ ಬಗ್ಗೆ ಚರ್ಚೆ ಆಗುತ್ತದೆ ಎಂದು ಹೇಳಿದರು.