ಹುಬ್ಬಳ್ಳಿ: ನಿನ್ನೆ ಮುಂಜಾನೆ ಶಾಂತವಾಗಿದ್ದ ಹುಬ್ಬಳ್ಳಿ ರೈಲ್ವೆ ನಿಲ್ದಾಣ, ಮಧ್ಯಾಹ್ನದ ಹೊತ್ತಿಗೆ ಬೆಚ್ಚಿ ಬಿದ್ದಿತ್ತು. 12.36ಕ್ಕೆ ರೈಲ್ವೆ ನಿಲ್ದಾಣದಲ್ಲಿ ಸ್ಫೋಟಕಗಳಿದ್ದ ಬಾಕ್ಸ್ ಬ್ಲಾಸ್ಟ್ ಆಗುತ್ತಿದ್ದಂತೆ ಜನರು ಬೆಚ್ಚಿ ಬಿದ್ದಿದ್ದರು. ಇದರ ತನಿಖೆಯನ್ನು ಚುರುಕುಗೊಳಿಸಿರುವ ರೈಲ್ವೆ ಪೊಲೀಸರಿಗೆ ಮಹತ್ವದ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.
ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟಗೊಂಡ ಬಾಕ್ಸ್ಗಳನ್ನು ಕೊಲ್ಲಾಪುರಕ್ಕೆ ಸಾಗಿಸಲಾಗುತ್ತಿತ್ತಾ ಎನ್ನುವ ಅನುಮಾನ ತನಿಖಾಧಿಕಾರಿಗಳಿಗೆ ಕಾಡುತ್ತಿದೆ. ಕಳೆದ ಮೂರು ದಿನಗಳ ಹಿಂದೆ ಕೊಲ್ಲಾಪುರದಲ್ಲಿಯೂ ಹುಬ್ಬಳ್ಳಿ ಮಾದರಿಯಲ್ಲೆ ಸ್ಫೋಟ ಸಂಭವಿಸಿತ್ತು. ಕೊಲ್ಲಾಪುರದಲ್ಲಿ ನಡೆದ ಸ್ಫೋಟದ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಬೋರಲಿಂಗಯ್ಯ, ಆರ್‌ಪಿಎಫ್ ಎಸ್‌ಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ತನಿಖಾ ತಂಡಗಳನ್ನ ನೇಮಕ ಮಾಡಲಾಗಿದೆ. ವಿಜಯವಾಡದಿಂದ ಹುಬ್ಬಳ್ಳಿಗೆ ಸ್ಫೋಟಕ ತುಂಬಿದ್ದ ಬಾಕ್ಸ್ಗಳು ಬಂದಿದ್ದು ಹೇಗೆ ಎನ್ನುವುದನ್ನ ತನಿಖೆ ಮಾಡಲಾಗುತ್ತಿದೆ. ಅಷ್ಟೆ ಅಲ್ಲದೆ ಬಾಕ್ಸ್ಗಳ ಮೇಲಿರುವ ಬರಹಗಳು ಸಂಚಲನ ಮೂಡಿಸಿದ್ದು, ತನಿಖೆಗೆ ಮಹತ್ವದ ಸುಳಿವು ನೀಡಿವೆ. ರೈಲ್ವೆ ಆವರಣದ ಬಯಲು ಪ್ರದೇಶದಲ್ಲಿ ಮರಳು ತುಂಬಿದ ಚೀಲಗಳ ರಾಶಿಯಲ್ಲಿ ಸ್ಫೋಟಕಗಳಿರುವ ಬಾಕ್ಸ್ ಇಡಲಾಗಿದ್ದು, ಇಂದು ಆರ್‌ಪಿಎಫ್ ಡಿಜಿ ಅರುಣಕುಮಾರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಎಸ್‌ಎಫ್‌ಎಲ್ ತಂಡ ಸ್ಥಳಕ್ಕೆ ಆಗಮನಿಸಿ ಸ್ಫೋಟಕದ ಸ್ಯಾಂಪಲ್ಗಳನ್ನು ಸಂಗ್ರಹಿಸಿಕೊಂಡು ಹೋಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನು ಬಂಧಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಡೆದಿರುವ ಸ್ಫೋಟ ಪ್ರಕರಣಕ್ಕೂ ಕೊಲ್ಲಾಪುರಕ್ಕೂ ಲಿಂಕ್ ಇದೆ ಎನ್ನುವ ಅನುಮಾನ ಬಲವಾಗುತ್ತಿದ್ದು, ತನಿಖೆ ಚುರುಕುಗೊಂಡಿದೆ. ಮತ್ತೊಂದೆಡೆ ರೈಲ್ವೆ ಪೊಲೀಸರ ಭದ್ರತಾ ವೈಫಲ್ಯದ ಬಗ್ಗೆ ಪ್ರಶ್ನೆ ಮೂಡಿದೆ.