ಹುಬ್ಬಳ್ಳಿ:ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ಹಿನ್ನೆಲೆಯಲ್ಲಿ ರಾಷ್ಟ್ರದ ಪ್ರಥಮ ಪ್ರಜೆಯ ಸ್ವಾಗತಕ್ಕೆ ವಾಣಿಜ್ಯನಗರಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪೌರ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ರಾಷ್ಟ್ರಪತಿಯವರಿಗೆ ಸಿದ್ಧಾರೂಢ ಶ್ರೀಗಳ 900 ಗ್ರಾಂ ತೂಕದ ಬೆಳ್ಳಿಯ ಮೂರ್ತಿಯನ್ನು ನೆನಪಿನ ಕಾಣಿಕೆಯಾಗಿ ನೀಡಲಾಗುತ್ತಿದೆ. ರಾಷ್ಟ್ರಪತಿಯವರ ಸ್ವಾಗತ ಕೋರಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಾದ್ಯಂತ ಫ್ಲೆಕ್ಸ್, ಬ್ಯಾನರ್ ರಾರಾಜಿಸುತ್ತಿವೆ.
ಮೈಸೂರು ದಸರಾ ಉದ್ಘಾಟನೆ ಬಳಿಕ ಅಲ್ಲಿಂದ ವಿಶೇಷ ವಿಮಾನದ ಮೂಲಕ ಆಗಮಿಸುತ್ತಿರುವ ರಾಷ್ಟ್ರಪತಿ ಮುರ್ಮು ಅವರು, ಮಧ್ಯಾಹ್ನ 12.45ಕ್ಕೆ ಪಾಲಿಕೆಯಿಂದ ಪೌರ ಸನ್ಮಾನ ಸ್ವೀಕರಿಸಲಿದ್ದಾರೆ. ಹುಬ್ಬಳ್ಳಿಯ ಜಿಮ್ ಖಾನಾ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮಕ್ಕೂ ಮುನ್ನ ಪಾಲಿಕೆ ಸದಸ್ಯರ ಜೊತೆ ರಾಷ್ಟ್ರಪತಿಗಳ ಫೋಟೋ ಸೆಷನ್ ನಡೆಯಲಿದೆ. ನಂತರ ರಾಷ್ಟ್ರಪತಿಯವರು ಪೌರ ಸನ್ಮಾನ ಸ್ವೀಕರಿಸಲಿದ್ದಾರೆ. ಇದೇ ವೇಳೆ ರಾಷ್ಟ್ರಪತಿಯವರಿಗೆ ಸಿದ್ಧಾರೂಢರ ಬೆಳ್ಳಿಯ ಮೂರ್ತಿಯನ್ನು ನೆನಪಿನ ಕಾಣಿಕೆಯಾಗಿ ನೀಡಲಾಗುತ್ತಿದೆ.
ರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ಜಿಮ್ ಖಾನಾ ಮೈದಾನದ ಬಳಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳಗಳಿಂದ ಪರಿಶೀಲನೆ ನಡೆದಿದೆ. ಹುಬ್ಬಳ್ಳಿ ಕಾರ್ಯಕ್ರಮದ ನಂತರ ಧಾರವಾಡ ಐಐಐಟಿ ಉದ್ಘಾಟನೆಗೆ ತೆರಳಲಿದ್ದಾರೆ.