ಹುಬ್ಬಳ್ಳಿ :ಕೊರೊನಾ ಭೀತಿಯ ಹಿನ್ನೆಲೆ ಶ್ರೀ ಸಿದ್ಧಾರೂಢ ಸ್ವಾಮೀಜಿಯ ತೆಪ್ಪೋತ್ಸವವನ್ನು ಸರಳವಾಗಿ ಆಚರಿಸಲಾಯಿತು.
ಶ್ರೀ ಸಿದ್ಧಾರೂಢ ಮಠದ ತೆಪ್ಪೋತ್ಸವ.. ನೂಲು ಹುಣ್ಣಿಮೆ ಮರು ದಿನ ಪ್ರತಿವರ್ಷ ವಿಜೃಂಭಣೆಯಿಂದ ಸಾವಿರಾರು ಭಕ್ತರು ತೆಪ್ಪೋತ್ಸವದಲ್ಲಿ ಪಾಲ್ಗೊಂಡು, ಸಿದ್ಧಾರೂಢ ಶ್ರೀಗಳ ಕೃಪೆಗೆ ಪಾತ್ರರಾಗುತ್ತಿದ್ದರು. ಆದರೆ, ಈ ವರ್ಷ ಕೊರೊನಾ ಹಿನ್ನೆಲೆ ಸರಳವಾಗಿ ತೆಪ್ಪೋತ್ಸವವನ್ನು ಶ್ರೀ ಸಿದ್ಧಾರೂಢ ಮಠದ ಟ್ರಸ್ಟ್ ಕಮೀಟಿ ಆಯೋಜಿಸಿತ್ತು.
ಓಂ ನಮ: ಶಿವಾಯ ನಾಮಸ್ಮರಣೆಗಳ ಮೂಲಕ ಕಲ್ಯಾಣಿಯಲ್ಲಿ ತೇರು ಐದು ಸುತ್ತು ಪ್ರದಕ್ಷಿಣೆ ಹಾಕಿಸಲಾಯಿತು. ಇದನ್ನು ಕಣ್ತುಂಬಿಕೊಳ್ಳಲು ಪ್ರತಿ ವರ್ಷ ಕಲ್ಯಾಣಿಯ ಸುತ್ತ ಕಿಕ್ಕಿರಿದು ಭಕ್ತರು ತುಂಬಿರುತ್ತಿದ್ದರು. ಉತ್ತತ್ತಿ, ಬಾಳೆಹಣ್ಣು, ಲಿಂಬೆಹಣ್ಣು ಎಸೆದು ಸ್ವಾಮಿ ಆಶೀರ್ವಾದ ಪಡೆಯಲಾಗುತ್ತಿತ್ತು.
ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶದಿಂದಲೂ ಭಕ್ತರು ಜಲರಥೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದರು. ಮಠದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬೆರಳಣೆಕೆಯಷ್ಟು ಭಕ್ತರು ಪಾಲ್ಗೊಂಡಿದ್ದರು.