ಹುಬ್ಬಳ್ಳಿ:ಜನವರಿ 14 ರಂದು ಸದ್ಗುರು ಸಿದ್ಧರಾಮೇಶ್ವರ ಜಯಂತಿ ಹಿನ್ನೆಲೆಯಲ್ಲಿ ತಹಶೀಲ್ದಾರರ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು. ಆದರೆ ಅಲ್ಲಿ ಬೋವಿ ಸಮಾಜ ಅಂದರೆ ಸಿದ್ಧರಾಮೇಶ್ವರ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ವಡ್ಡರ, ಬೋವಿ ಸಮಾಜದ ಮುಖಂಡರು ಸಭೆಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ವಡ್ಡರ, ಬೋವಿ ಸಮಾಜದ ಜನರು ಶ್ರೀ ಸದ್ಗುರು ಸಿದ್ಧರಾಮೇಶ್ವರರ ಅನುಯಾಯಿಗಳಾಗಿದ್ದು, ಈ ಹಿನ್ನಲೆಯಲ್ಲಿ ಅನೇಕ ಮಂದಿ ಶ್ರೀ ಸಿದ್ದರಾಮೇಶ್ವರ ಜಯಂತಿ ಪೂರ್ವಭಾವಿ ಸಭೆಗೆ ಹಾಜರಾಗಿದ್ದೆವು. ಆದರೆ ಅಧಿಕಾರಿಗಳು ಸಭೆಯನ್ನು ಕಾಟಾಚಾರಕ್ಕೆ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟಸಿದರು.
ಸಿದ್ಧರಾಮೇಶ್ವರ ಸಮುದಾಯವನ್ನು ನಿರ್ಲಕ್ಷ್ಯ ಮಾಡಲಾಗಿದೆ: ಬೋವಿ ಸಮಾಜದಿಂದ ಪ್ರತಿಭಟನೆ ಜಯಂತಿ ಆಚರಣೆಗೆ ಹದಿನೈದು ದಿನಗಳ ಮುಂಚಿತವಾಗಿ ಪೂರ್ವಭಾವಿ ಸಭೆ ಕರೆಯಬೇಕೆಂದು ತಿಳಿಸಲಾಗಿದ್ದರೂ ಇಂದು ಸಭೆ ನಡೆಸಿದ್ದಾರೆ. ಆದರೆ ಈ ಸಭೆಯಲ್ಲಿ ತಹಶೀಲ್ದಾರರನ್ನು ಹೊರತು ಪಡಿಸಿ ಯಾವೊಬ್ಬ ಇಲಾಖಾಧಿಕಾರಿಗಳು ಆಗಮಿಸಿರಲಿಲ್ಲ. ಇದರಿಂದಾಗಿ ಸಿದ್ದರಾಮೇಶ್ವರರನ್ನು ಹಾಗೂ ಸಮಾಜವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಅಷ್ಟೇ ಅಲ್ಲದೆ, ನಮ್ಮ ಸಮುದಾಯವನ್ನು ಅವಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಮನೋಭಾವವನ್ನು ಸಮಾಜದ ಮುಖಂಡರು ತೀವ್ರವಾಗಿ ಖಂಡಿಸಿದ್ದು ಈ ಹಿನ್ನಲೆಯಲ್ಲಿ ಸಭೆಯನ್ನು ಬಹಿಷ್ಕಾರ ಮಾಡಿ ಹೋರಾಟ ಮಾಡಲಾಗುತ್ತಿದೆ. ಮುಂದೆಯೂ ಕೂಡಾ ಇದೇ ಪ್ರವೃತ್ತಿ ಮುಂದುವರೆದರೆ ಜಯಂತಿ ದಿನದಂದೇ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.