ಧಾರವಾಡ: ಭಾಷಣದ ವೇಳೆ ಅಭ್ಯರ್ಥಿಗಳ ಪರವಾಗಿ ಆಕಾಂಕ್ಷಿಗಳ ಬೆಂಬಲಿಗರು ಘೋಷಣೆ ಹಾಕಿದ್ದಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಗರಂ ಆದರು. ಸುಮ್ಮನೆ ಇರದಿದ್ದರೆ ನಾನು ವೇದಿಕೆಯಿಂದಲೇ ಹೊರಟು ಹೋಗುತ್ತೇನೆ ಎಂದರು. ಜಿಲ್ಲೆಯ ನವಲಗುಂದ ಕ್ಷೇತ್ರದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾತು ಕೇಳುವ ಹಾಗಿದ್ದರೆ ಇಲ್ಲಿ ಇರಿ. ಇಲ್ಲವಾದರೆ ನಿಮಗೆ ಕೈಜೋಡಿಸಿ ಕೇಳಿಕೊಳ್ಳುತ್ತೇನೆ ಹೊರಟು ಹೋಗಿ ಎಂದರು.
ಇಲ್ಲಿ ಎಲ್ಲದ್ದಕ್ಕೂ ಇತಿಮಿತಿ ಇರಬೇಕು. ಕುಡಿಸಿಕೊಂಡು ಬಂದಿದ್ದೀರಾ? ಎಂದು ಟಿಕೆಟ್ ಆಕಾಂಕ್ಷಿಗಳಿಗೆ ಸಿದ್ದರಾಮಯ್ಯ ಅವಾಜ್ ಹಾಕಿದರು. ಇಷ್ಟಾದರೂ ಬೆಂಬಲಿಗರು ಸುಮ್ಮನಾಗದ ಹಿನ್ನೆಲೆ ಸಿದ್ದರಾಮಯ್ಯ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದರು. ನಾನು ಈ ಕ್ಷೇತ್ರಕ್ಮೆ ಬಂದಿರುವುದು ಪ್ರಜಾಧ್ವನಿ ಕಾರ್ಯಕ್ರಮಕ್ಕೆ. ಇಲ್ಲಿ ಟಿಕೆಟ್ ಹಂಚಿಕೆ ಮಾಡಲು ಬಂದಿಲ್ಲ ಎಂದು ಆಕಾಂಕ್ಷಿಗಳ ವಿರುದ್ಧವೂ ಹರಿಹಾಯ್ದರು.
ಟಿಕೆಟ್ ಹಂಚಿಕೆ ಮಾಡಲು ಬಂದಿಲ್ಲ:ನಾವು ಇಲ್ಲಿ ಭಾಷಣ ಮಾಡಲಿಕ್ಕೆ ಬಂದಿಲ್ಲ. ಅತ್ಯಂತ ಕೆಟ್ಟ ಸರ್ಕಾರವನ್ನು ತೆಗೆದು ಹಾಕಲಿಕ್ಕೆ ಬಂದಿದ್ದೇವೆ. ನವಲಗುಂದ ಕ್ಷೇತ್ರ ಕಾಂಗ್ರೆಸ್ ಗಂಡು ಮೆಟ್ಟಿದ ಕ್ಷೇತ್ರವಾಗಿದೆ. ಇಲ್ಲಿರುವ ಬಿಜೆಪಿ ಶಾಸಕನನ್ನು ಮನೆಗೆ ಕಳುಹಿಸಬೇಕಿದೆ. ಬಿಜೆಪಿಯವರು ಮನೆ ಹಾಳಾಗ, ಇವರ ಕೈಯಿಂದ ಒಂದೇ ಒಂದು ಮನೆ ಕೊಡಲಿಕ್ಕೆ ಆಡಲಿಲ್ಲ. ಈ ಸರ್ಕಾರವನ್ನು ಮನೆಗೆ ಕಳುಹಿಸಬೇಕಾದ್ರೆ ಯಾರಿಗೆ ಟಿಕೆಟ್ ನೀಡಿದ್ರು ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಅರ್ಜಿ ಹಾಕಿದವರಿಗೆಲ್ಲ ಟಿಕೆಟ್ ಕೊಡಲಿಕ್ಕೆ ಆಗುವುದಿಲ್ಲ. ಇಲ್ಲಿ ಎಂಟು ಜನ ಟಿಕೆಟ್‌ಗಾಗಿ ಅರ್ಜಿ ಹಾಕಿದ್ದಾರೆ. ಘೋಷಣೆ ಹಾಕಿದ್ರೆ, ಜನರನ್ನು ಕರೆದುಕೊಂಡು ಬಂದ್ರೆ ನಾವು ಟಿಕೆಟ್ ಕೊಡುವುದಿಲ್ಲ. ಜನ ಬೆಂಬಲ ಯಾರಿಗೆ ಇದೆಯೋ ಅವರಿಗೆ ಎಐಸಿಸಿ ಟಿಕೆಟ್ ನೀಡುತ್ತದೆ. ಟಿಕೆಟ್ ಆಕಾಂಕ್ಷಿಗಳಿಗೆ ಸರಿಯಾದ ಸ್ಥಾನಮಾನ ನೀಡಲಾಗುತ್ತದೆ. ನನ್ನ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ಸರ್ಕಾರವನ್ನು ನಾನು ಎಂದೂ ನೋಡಿಲ್ಲ ಎಂದು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.