ಹುಬ್ಬಳ್ಳಿ :ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ಬಿಜೆಪಿಯವರು ಏನು ಅಭಿವೃದ್ಧಿ ಮಾಡಿಲ್ಲ. ಇವಾಗ ಹಾನಗಲ್ಲಿನಲ್ಲಿ 7 ಸಾವಿರ ಮನೆ ಕೊಟ್ಟಿದ್ದೇನೆ ಎಂದು ಆದೇಶ ಮಾಡಿಕೊಂಡು ಬಂದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆಗಾಗಿ ಸಿಎಂ ಬೊಮ್ಮಾಯಿಯವರು ಎರಡುವರೆ ವರ್ಷದಲ್ಲಿ ಒಂದು ಮನೆ ಕೊಟ್ಟಿಲ್ಲ. ಈಗ ಹಾನಗಲ್‌ನಲ್ಲಿ ಮನೆ ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಈವರೆಗೂ ಒಂದೇ ಒಂದು ಮನೆ ಕಟ್ಟಿಲ್ಲ, ರಸ್ತೆ ಮಾಡಿಲ್ಲ ಎಂದರು.
ಬಿಜೆಪಿಯವರಿಗೆ ದುಡ್ಡು ಹಂಚೋದೆ ಕೆಲಸ. ಒಂದೊಂದು ಕ್ಷೇತ್ರದಲ್ಲಿ 10 ರಿಂದ 12 ಸಚಿವರು ಠಿಕಾಣಿ ಹೂಡಿದ್ದಾರೆ. ಚುನಾವಣೆ ಆಯೋಗಕ್ಕೆ ದೂರು ನೀಡುತ್ತೇವೆ. ಹಣದ ಚೀಲ ತುಂಬಿಕೊಂಡು ಬಂದಿದ್ದಾರೆ. ನಾನು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡೋಕೆ ಬೊಮ್ಮಾಯಿಯವರಿಗೆ ಸವಾಲ್ ಹಾಕಿದ್ದೆ. ಆದ್ರೆ, ಅವರು ಅಸೆಂಬ್ಲಿಯಲ್ಲಿ ಚರ್ಚೆ ಮಾಡೋಣ ಅಂತಾರೆ ಎಂದು ಕುಟುಕಿದರು.