ಹುಬ್ಬಳ್ಳಿ/ಬೆಂಗಳೂರು:ಬಿಜೆಪಿಯವರು ಬಿಟ್ಟಿ ಹಣದಲ್ಲಿ ಮತ್ತು ಲಂಚದ ಹಣದಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡ್ತಿದಾರೆ. ರಾಜ್ಯದಲ್ಲಿ ಮಳೆ ಬಂದು ಸಾಕಷ್ಟು ಸಮಸ್ಯೆ ಆಗಿದೆ. ಸುಮಾರು 7ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಬೆಂಗಳೂರಿನಲ್ಲೂ ಸಹ ಮಳೆಯಿಂದಾಗಿ ಸಮಸ್ಯೆಯಾಗಿದೆ. ಆದರೆ, ಪರಿಹಾರ ಕೊಡುವುದನ್ನು ಬಿಟ್ಟು ಲಂಚ ಹೊಡೆದಿರೋ ದುಡ್ಡಿನಲ್ಲಿ ಬಿಜೆಪಿಯವರು ಕಾರ್ಯಕ್ರಮ ಮಾಡ್ತಿದಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಂಕಷ್ಟದಲ್ಲಿರುವ ಜನರಿಗೆ ಸ್ಪಂದನೆ ಮಾಡೋದು ಬಿಟ್ಟು ಡ್ಯಾನ್ಸ್ ಮಾಡ್ತಿದಾರೆ. ಉಮೇಶ ಕತ್ತಿಯವರು ಉತ್ತರ ಕರ್ನಾಟಕದ ರಾಜಕಾರಣಿ, ಅವರದ್ದೇ ಪಕ್ಷದ ಪ್ರಭಾವಿ ರಾಜಕಾರಣಿ. ಅವರ ನಿಧನದ ಹಿನ್ನೆಲೆ ಒಂದು ಕಡೆ ಶೋಕಾಚರಣೆ ಮಾಡ್ತೀವಿ ಅಂತಾರೆ ಇನ್ನೊಂದುಕಡೆ ಡ್ಯಾನ್ಸ್ ಮಾಡ್ತಾರೆ ಎಂದು ವ್ಯಂಗ್ಯವಾಡಿದರು.
ಜನರಿಗೆ ಸ್ಪಂದಿಸದೇ ಏನು ಕಾರ್ಯಕ್ರಮ ಮಾಡ್ತಾರೇ?. ಹೇಳ್ಕೊಳ್ಳುವುದಕ್ಕೆ ಇವರ ಹತ್ರ ಏನು ಸಾಧನೆಗಳಿವೆ? ಶೇ 40ರಷ್ಟು ಕಮಿಷನ್ ಬಗ್ಗೆ ಹೇಳಿಕೊಳ್ಳಬೇಕಷ್ಟೇ. ಜನ ಸೇರಿಸ್ಕೊಂಡು ದುಡ್ಡು ಖರ್ಚು ಮಾಡ್ಕೊಂಡು ರಾಜಕೀಯ ಮಾಡ್ತಿದ್ದಾರೆ. ಇದು ರಾಜಕೀಯ ಪ್ರೇರಿತ ಜನ ಸ್ಪಂದನ. ಜನ ಸ್ಪಂದನ ಅಂದ್ರೆ ಏನು? ಜನರ ಕಷ್ಟಕ್ಕೆ ಸ್ಪಂದಿಸುವುದು ಜನ ಸ್ಪಂದನ. ಬರೀ ಹೆಸರು ಮಾತ್ರ ಜನ ಸ್ಪಂದನ ಅಂದ್ರೆ ಆಗುತ್ತ ಎಂದು ಹರಿಹಾಯ್ದರು.