ಹುಬ್ಬಳ್ಳಿ: ಅಣ್ಣಿಗೇರಿ ಪಟ್ಟಣದ ಸಿದ್ದಲಿಂಗಪ್ಪ ಪೂಜಾರ ಅವರು ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರಾಜ್ಯಕ್ಕೆ ಮತ್ತು ಅಣ್ಣಿಗೇರಿ ಪಟ್ಟಣಕ್ಕೆ ಕೀರ್ತಿ ತಂದಿದ್ದಾನೆ. 589 ರ‍್ಯಾಂಕ್ ಪಡೆಯುವ ಮೂಲಕ ಅಣ್ಣಿಗೇರಿ ಪಟ್ಟಣಕ್ಕೆ ಹಾಗೂ ರಾಜ್ಯಕ್ಕೆ ಹೆಮ್ಮೆಪಡುವ ಹಾಗೇ ಮಾಡಿದ್ದಾರೆ.
ತಂದೆ ಕೆಎಸ್ಆರ್ಟಿಸಿ ಕಂಡಕ್ಟರ್:ಸಿದ್ದಲಿಂಗಪ್ಪ ಮೂಲ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ನಿವಾಸಿಯಾಗಿದ್ದು, ಬಿ.ಇ ಎಲೆಕ್ಟ್ರಾನಿಕ್ಸ್ ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಮದುವೆಯಾಗಿರುವ ಸಿದ್ದಲಿಂಗಪ್ಪ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದಿರುವ ಸಿದ್ದಲಿಂಗಪ್ಪ ಅವರು ಬಡತನದಲ್ಲಿ ಓದಿ ದೇಶದ ಅತ್ಯುನ್ನತ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
"ನನ್ನ ಮಗ ಏನು ಓದುತ್ತಿದ್ದಾನೆ ಎಂಬುದೇ ನನಗೆ ಗೊತ್ತಿರಲಿಲ್ಲ", ಯುಪಿಎಸ್‌ಸಿ 589 ರ‍್ಯಾಂಕ್ ಪಡೆದ ಯುವಕ ಸಿದಲಿಂಗ್ಪಪ್ಪ ತಾಯಿ ಶಾಂತವ್ವ ಮುಗ್ದ ಮನಸ್ಸಿನಿಂದ ತನ್ನ ಮನದಾಳವನ್ನು ಬಿಚ್ಚಿಟ್ಟಿದ್ದಾರೆ. ದೊಡ್ಡ ಪರೀಕ್ಷೆ ಬರೆದು ನಮ್ಮ ಮಗ ಧಾರವಾಡ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ನಮ್ಮ ಮಗ ಅತ್ಯಂತ ದೊಡ್ಡ ಪರೀಕ್ಷೆಯಲ್ಲಿ ಪಾಸ ಆಗಿದ್ದಾನೆ. ಅವನು ಇಷ್ಟು ದೊಡ್ಡ ಪರೀಕ್ಷೆಯಲ್ಲಿ ಪಾಸ್ ಆಗುತ್ತಾನೆ ಎಂದು ನಿರೀಕ್ಷೆ ಇರಲಿಲ್ಲ ಎಂದು ಮಗನ ಸಾಧನೆ ಬಗ್ಗೆ ತಾಯಿ ಖುಷಿ ಹಂಚಿಕೊಂಡಿದ್ದಾರೆ.
ಸಿದ್ದಲಿಂಗಪ್ಪ ಅವರದ್ದು ಬಡ ಕುಟುಂಬ ತಂದೆ ಹುಬ್ಬಳ್ಳಿ ಗ್ರಾಮೀಣ ಬಸ್ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಈಗಲೂ ತಗಡಿನ ಶೆಡ್ಡಿನ ಮನೆಯಲ್ಲಿಯೇ ವಾಸವಾಗಿದ್ದಾರೆ. ಸಿದ್ದಲಿಂಗಪ್ಪ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್ ಆಗಿದಕ್ಕೆ ಇಡೀ ಏರಿಯಾದ ಜನರು ಸಿದ್ದಲಿಂಗಪ್ಪ ಪೋಷಕರಿಗೆ ಸಿಹಿ ನೀಡಿ ಶುಭಾಶಯ ಕೋರಿದರು.