ಹುಬ್ಬಳ್ಳಿ:ದಿನಕ್ಕೆ ಸಾವಿರಾರು ಜನರಿಗೆ ಚಿಕಿತ್ಸೆ ನೀಡುವ ಕಿಮ್ಸ್ ಆಸ್ಪತ್ರೆಯಲ್ಲೀಗ ಹೃದಯ ಚಿಕಿತ್ಸೆಗೆ ಪೂರಕ ಸೌಲಭ್ಯದಿಂದ ವಂಚಿತವಾಗಿದೆ. ಹೃದಯ ಚಿಕಿತ್ಸೆಗೆ ಕೇವಲ ಒಬ್ಬರೇ ಒಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಹೃದಯ ಚಿಕಿತ್ಸೆಗೆ ಬರುವ ರೋಗಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಇಂದು ವಿಶ್ವ ಹೃದಯ ದಿನ. ಅಲ್ಲದೇ ಅದೆಷ್ಟೋ ಹೃದಯ ಚಿಕಿತ್ಸೆ ಆಸ್ಪತ್ರೆಗಳು ತಮ್ಮ ತಮ್ಮ ಸೌಲಭ್ಯಗಳ ಕುರಿತು ಹೇಳಿಕೊಳ್ಳುತ್ತಿವೆ. ಆದ್ರೆ ಉತ್ತರ ಕರ್ನಾಟಕದ ಸಂಜೀವಿನಿಗೆ ಮಾತ್ರ ಹೃದಯ ಚಿಕಿತ್ಸೆಗೆ ಪೂರಕವಾದ ವೈದ್ಯರ ಸೌಲಭ್ಯ ಮಾತ್ರ ಇಲ್ಲವಾಗಿದೆ. ಸುಮಾರು ಹತ್ತು ಹನ್ನೆರಡು ವರ್ಷಗಳಿಂದ ಹೃದಯ ಚಿಕಿತ್ಸೆಗೆ ಯಾವುದೇ ವೈದ್ಯರು ನೇಮಕವಾಗದೇ ಇರುವುದರಿಂದ ಕೇವಲ ಒಬ್ಬ ವೈದ್ಯರು ಮಾತ್ರ ಚಿಕಿತ್ಸೆ ನೀಡುತ್ತಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸೆಗೆ ಸೂಕ್ತ ವೈದ್ಯಕೀಯ ಸಿಬ್ಬಂದಿಗಳ ಕೊರತೆ ಇದೆ. ಪ್ರತಿದಿನ 1000-1500 ಜನ ಭೇಟಿ ನೀಡುವ ಕಿಮ್ಸ್ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರು ಹಾಗೂ ವೈದ್ಯರೇ ಇಲ್ಲದಿರುವುದು ವಿಪರ್ಯಾಸವೇ ಸರಿ. ಹತ್ತು ಹಲವಾರು ವಿಭಾಗದಲ್ಲಿ ಕೂಡ ಉತ್ತಮ ಚಿಕಿತ್ಸೆ ನೀಡುವ ಮೂಲಕ ಹೆಸರುವಾಸಿಯಾಗಿರುವ ಕಿಮ್ಸ್ ಕೋವಿಡ್ ವಿರುದ್ಧ ಕೂಡ ಸೆಣಸಾಟದಲ್ಲಿ ಯಶಸ್ವಿ ಪ್ರಯತ್ನದ ಮೂಲಕ ಸಾವಿರಾರು ರೋಗಿಗಳನ್ನು ಗುಣಮುಖರನ್ನಾಗಿ ಮಾಡಿದೆ. ಆದರೇ ಹೃದಯ ಚಿಕಿತ್ಸೆಗೆ ಮಾತ್ರ ಸೂಕ್ತ ವೈದ್ಯಕೀಯ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ. ಕೂಡಲೇ ವೈದ್ಯರನ್ನು ನಿಯೋಜನೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದಲ್ಲದೇ ಆಸ್ಪತ್ರೆಯಲ್ಲೂ ಸುಮಾರು 30-35 ತಜ್ಞ ವೈದ್ಯರ ಸ್ಥಾನಗಳು ಖಾಲಿ ಇವೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ವೈದ್ಯರನ್ನು ನೇಮಕ ಮಾಡಿ ಬಡ ರೋಗಿಗಳ ಹಿತ ಕಾಪಾಡಲು ಮುಂದಾಗಬೇಕಿದೆ.