ಕರ್ನಾಟಕ

karnataka

ETV Bharat / state

ಲಿಂಗಾಯತ ಅಧಿಕಾರಿಗಳ ಕಡೆಗಣನೆ ಬಗ್ಗೆ ಶಿವಶಂಕರಪ್ಪರಿಗೆ ಮಾಹಿತಿ ಇದೆ: ಕೂಡಲ ಸಂಗಮ ಶ್ರೀ - ​ ETV Bharat Karnataka

ಶಾಸಕ ಶಾಮನೂರು ಶಿವಶಂಕರಪ್ಪನವರ ಬಳಿ ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಲಿಂಗಾಯತ ಅಧಿಕಾರಿಗಳು ಮಾತನಾಡಿದ್ದಾರೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಬಸವ ಜಯಮೃತ್ಯಂಜಯ ಸ್ವಾಮೀಜಿ
ಬಸವ ಜಯಮೃತ್ಯಂಜಯ ಸ್ವಾಮೀಜಿ

By ETV Bharat Karnataka Team

Published : Oct 6, 2023, 9:15 PM IST

ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ

ಹುಬ್ಬಳ್ಳಿ : ಲಿಂಗಾಯತ ಅಧಿಕಾರಿಗಳ ಕಡೆಗಣನೆ ಬಗ್ಗೆ ಕಾಂಗ್ರೆಸ್​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಮಾಹಿತಿ ಇದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿವಶಂಕರಪ್ಪರನ್ನು ಕರೆದು ಈ ಬಗ್ಗೆ ಮಾತನಾಡಬೇಕು ಎಂದು ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.

ನಗರದಲ್ಲಿಂದು ಮಾತನಾಡಿದ ಶ್ರೀಗಳು, ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರನ್ನು ಮತ್ತು ಲಿಂಗಾಯತ ಅಧಿಕಾರಿಗಳಿಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಶಿವಶಂಕರಪ್ಪರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಶಾಮನೂರು ಶಿವಶಂಕರಪ್ಪನವರು ಹೇಳಿದ್ದರಲ್ಲಿ ಮಾಹಿತಿ ಇದೆ. ಅವರು ವೀರಶೈವ ಮಹಾಸಭಾ ರಾಷ್ಟ್ರೀಯ ಕಾರ್ಯಾಧ್ಯಕ್ಷರು. ಅವರ ಬಳಿ ಲಿಂಗಾಯತ ಅಧಿಕಾರಿಗಳು ತಮ್ಮ ಮೇಲೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಿರಬಹುದು. ನನ್ನ ಬಳಿಯೂ ಕೆಲ ಲಿಂಗಾಯತ ಅಧಿಕಾರಿಗಳು ಈ ಬಗ್ಗೆ ಹೇಳಿಕೊಂಡಿದ್ದಾರೆ ಎಂದರು.

ಇದನ್ನೂ ಓದಿ:ನಮ್ಮ ಸಮಾಜದ ಅಧಿಕಾರಿಗಳಿಗೆ ತೊಂದರೆಯಾಗಿದೆ: ಶಾಸಕ ಶಾಮನೂರು ಶಿವಶಂಕರಪ್ಪ ಅತೃಪ್ತಿ

ಆದರೆ, ನಾನು ಸಮಾಜದ ಗುರುಗಳು ಆಗಿದ್ದರಿಂದ ಆಡಳಿತಾತ್ಮಕ ವಿಷಯದಲ್ಲಿ ಕೈ ಹಾಕಬಾರದು ಎನ್ನುವ ಕಾರಣಕ್ಕೆ ಏನೂ ಮಾತನಾಡಿಲ್ಲ. ಕೂಡಲೇ ಮುಖ್ಯಮಂತ್ರಿಗಳು ಶಾಮನೂರು ಶಿವಶಂಕರಪ್ಪನವರ ಜೊತೆಗೆ ಮಾತನಾಡಬೇಕು. ಸಮಾಜಕ್ಕೆ ಯಾವುದೇ ತಪ್ಪು ಸಂದೇಶ ಹೋಗಬಾರದು. ಲಿಂಗಾಯತ ಸಮಾಜದ ಅಧಿಕಾರಿಗಳು ದಕ್ಷ ಹಾಗೂ ಸಮರ್ಥರಿದ್ದಾರೆ. ಅಂತಹ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಕೊಡಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದು ತಿಳಿಸಿದರು.

2A ಮೀಸಲಾತಿಯ 6ನೇ ಹಂತದ ಸಮಾವೇಶ: ಅಕ್ಟೋಬರ್ 13 ರಂದು ಪಂಚಮಸಾಲಿ 2A ಮೀಸಲಾತಿ 6ನೇ ಹಂತದ ಸಮಾವೇಶವನ್ನು ಹುಬ್ಬಳ್ಳಿ ಹೊರವಲಯದ ಗಬ್ಬೂರು ಬೈಪಾಸ್ ಪಕ್ಕದ ಮೈದಾನದಲ್ಲಿ ಆಯೋಜನೆ ಮಾಡಲಾಗಿದೆ. ಈಗಾಗಲೇ ಬೆಳಗಾವಿ‌ ಜಿಲ್ಲೆಯ ನಿಪ್ಪಾಣಿಯಲ್ಲಿ ಹೋರಾಟ ಯಾತ್ರೆ ಆರಂಭವಾಗಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಈಗ ಧಾರವಾಡ ಜಿಲ್ಲೆಯ ಸಮಾವೇಶ ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ಮೈದಾನದಲ್ಲಿ ನಡೆಯಲಿದೆ ಶ್ರೀಗಳು ವಿವರಿಸಿದರು.

2A ಮೀಸಲಾತಿ, ಲಿಂಗಾಯತ ಉಪ ಪಂಗಡಗಳಿಗೆ ಕೇಂದ್ರದಿಂದ ಓಬಿಸಿ ದರ್ಜೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಹೋರಾಟ ಆರಂಭ ಮಾಡಲಾಗಿದೆ. ಸಮಾವೇಶ ನಡೆಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಸಲ್ಲಿಸಲಾಗುವುದು. ಕಳೆದ ಸರ್ಕಾರ ಕೊನೆಯ ಗಳಿಗೆಯಲ್ಲಿ ಮೀಸಲಾತಿ ಘೋಷಣೆ ಮಾಡಿದೆ. ಆದರೆ ಚುನಾವಣೆ ಘೋಷಣೆ, ನೀತಿ ಸಂಹಿತೆಯಿಂದ ಮೀಸಲಾತಿ ಜಾರಿ ಆಗಲಿಲ್ಲ. ಈ ಬಗ್ಗೆ ಕಾನೂನು ತೊಡಕು ಎದುರಾಯಿತು.‌ ಈಗಿನ ಸರ್ಕಾರಕ್ಕೆ ಸಹ ನಾವು ನಮ್ಮ ಹಕ್ಕು ನಮಗೆ ಕೊಡಿ ಅಂತಾ ಕೇಳುತ್ತಿದ್ದೇವೆ. ಹೋರಾಟದ ಮೂಲಕ ನಮ್ಮ ಮೀಸಲಾತಿ ಪಡೆದೇ ತೀರುತ್ತೇವೆ. ಸರ್ಕಾರ ನಮ್ಮನ್ನು ಕರೆದು ಮಾತುಕತೆ ನಡೆಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ:ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳ ಕಡೆಗಣನೆ ಬಗ್ಗೆ ಶಾಮನೂರು ಹೇಳಿಕೆ ತಪ್ಪು: ಶಾಸಕ ಬಸವರಾಜ ರಾಯರೆಡ್ಡಿ

ABOUT THE AUTHOR

...view details