ಧಾರವಾಡ: ಶಿವಮೊಗ್ಗದಲ್ಲಿ ಸೋಮವಾರ ನಡೆದ ಗಲಾಟೆ ಆಕಸ್ಮಿಕವಾದದ್ದಲ್ಲ. ಮುಂಬರುವ ಗಣೇಶ ಮೆರವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪೂರ್ವನಿಯೋಜಿತವಾಗಿ ಈ ಕೃತ್ಯ ನಡೆದಿದೆ ಎಂದು ಪ್ರಮೋದ ಮುತಾಲಿಕ್ ದೂರಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ 40 ವರ್ಷದಿಂದ ಹಿಂದೂ ಮಹಾಸಭಾದ ಗಣೇಶ ಮೆರವಣಿಗೆ ಆಗುತ್ತದೆ. ಈ ಹಿಂದೆ ಗಣೇಶ ಮೆರವಣಿಗೆ ಮಸೀದಿ ಮುಂದೆ ಹೋಗಬಾರದೆಂದು ಗಲಾಟೆ ಮಾಡಿದ್ದರು. ಆಗಿನಿಂದಲೇ ಸಂಘರ್ಷ ಆರಂಭವಾಗಿದೆ ಎಂದರು.
ಸಾವರ್ಕರ್ ಓರ್ವ ಪ್ರಖರ ಹಿಂದೂವಾದಿ ಮತ್ತು ರಾಷ್ಟ್ರೀಯವಾದಿ. ಅವರನ್ನು ವಿರೋಧಿಸುವುದು ಸೊಕ್ಕಿನ ನಡೆ. ಈ ವಿರೋಧ ಶುರು ಮಾಡಿದ್ದು ಕಾಂಗ್ರೆಸ್. ಕಾಂಗ್ರೆಸ್‌ಗೆ ನೆಹರೂ, ಇಂದಿರಾ ಗಾಂಧಿ, ಸೋನಿಯಾ, ರಾಹುಲ್ ಮಾತ್ರ ಬೇಕು. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಬೇಕಿಲ್ಲ ಎಂದು ಹರಿಹಾಯ್ದರು.
ಎಲ್ಲವೂ ಭಾರತೀಯ ಪ್ರದೇಶ: ಸಾವರ್ಕರ್ ಬಗ್ಗೆ ಮಾತನಾಡಲು ಕಾಂಗ್ರೆಸ್, ಮುಸ್ಲಿಮರಿಗೆ ಹಕ್ಕಿಲ್ಲ. ಸಿದ್ದರಾಮಯ್ಯ ಮುಸ್ಲಿಮರ ಏರಿಯಾದಲ್ಲಿ ಸಾವರ್ಕರ್ ಫೋಟೊ ಯಾಕೆ ಅಂತಾ ಕೇಳಿದ್ದಾರೆ. ನಮ್ಮಲ್ಲಿ ಹಿಂದೂ, ಮುಸ್ಲಿಂ ಏರಿಯಾ ಅಂತಿಲ್ಲ. ಎಲ್ಲವೂ ಭಾರತೀಯ ಏರಿಯಾವೇ. ಮುಸ್ಲಿಮರು ಬಾಯಿ ಮುಚ್ಚಿಕೊಂಡು ಇರುವುದನ್ನು ಕಲಿಯಬೇಕೆಂದು ಎಚ್ಚರಿಸಿದರು.
ಸ್ವಾತಂತ್ರ್ಯೋತ್ಸವದ ದಿನ ಜೇಬಿನಲ್ಲಿ ಚಾಕು ಯಾಕಿತ್ತು?, ಧ್ವಜ ಇರಬೇಕಿತ್ತು ಅಲ್ವಾ?. ತಿರಂಗಾ ಅಭಿಯಾನಕ್ಕೆ ಕೆಟ್ಟ ಹೆಸರು ತರುವ ಕುತಂತ್ರವಿದು. ಚಾಕು ಇತ್ತಂದ್ರೆ ಘಟನೆ ಪೂರ್ವನಿಯೋಜಿತ ಘಟನೆ ಎಂದೇ ಅರ್ಥ. ಬಿಜೆಪಿಯವರು ಬರೀ ಕಠಿಣ ಕ್ರಮ ಅಂತಷ್ಟೇ ಹೇಳುತ್ತಾರೆ. ಈ ಎಲ್ಲ ಗಲಾಟೆಗಳಿಗೆ ಬಿಜೆಪಿಯೂ ಕಾರಣ ಎಂದು ಟೀಕಿಸಿದರು.
ಶಿವಮೊಗ್ಗದಲ್ಲಿ ನಿರಂತರವಾಗಿ ಗಲಾಟೆ ಆಗುತ್ತಿದೆ. ಅದು ಮಾಜಿ ಸಿಎಂ, ಹಾಲಿ ಗೃಹ ಸಚಿವರ ಊರು. ಇಷ್ಟೆಲ್ಲ ಆದರೂ ಯಾಕೆ ಬಿಜೆಪಿ ಗಮನಿಸುತ್ತಿಲ್ಲ?. ಇನ್ನಾದರೂ ಹದ್ದುಬಸ್ತಿನಲ್ಲಿಡಬೇಕು. ನಿಮ್ಮ ಕೈಯಲ್ಲಿ ಆಗದೇ ಇದ್ರೆ ಮನೆಗೆ ಹೋಗಿ. ಕಠಿಣ ಕ್ರಮ ಅನ್ನೋದು ಹಾಸ್ಯಾಸ್ಪದವಾಗಿದೆ. ಹದ್ದುಬಸ್ತಿನಲ್ಲಿಡಲು ಆಗದಿದ್ದರೆ ನಾವು ಮಾಡಿ ತೋರಿಸ್ತೀವಿ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ 5ರ ಬಾಲೆಯ ಮೇಲೆ 15 ವರ್ಷದ ಬಾಲಕನಿಂದ ಅತ್ಯಾಚಾರ