ಹುಬ್ಬಳ್ಳಿ :ರಾಜ್ಯದ 2ನೇ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹು-ಧಾ ಮಹಾನಗರ ಪಾಲಿಕೆ ಕಾರ್ಯ ನಿಜಕ್ಕೂ ಜನರಲ್ಲಿ ಬೇಸರ ಮೂಡಿಸುವಂತಾಗಿದೆ. ಕಳಪೆ ಕಾಮಗಾರಿ ಹಾಗೂ ನಿರ್ಲಕ್ಷ್ಯದಿಂದ ಇಂದು ಮಹಾನಗರ ಪಾಲಿಕೆ ಆವರಣದಲ್ಲಿರುವ ಛತ್ರಪತಿ ಶಿವಾಜಿ ಮೂರ್ತಿ ನೆಲಕ್ಕುರುಳಿದೆ.
ಪಾಲಿಕೆ ಆವರಣದಲ್ಲಿಯೇ ನೆಲಕ್ಕೆ ಉರುಳಿದ ಶಿವಾಜಿ ಮೂರ್ತಿ.. ನಗರದ ಚಿಟಗುಪ್ಪಿ ಆಸ್ಪತ್ರೆಯ ಮುಂದಿರುವ ಮಹಾನಗರ ಪಾಲಿಕೆಯ ಉದ್ಯಾನವನದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಶಿವಾಜಿ ಮೂರ್ತಿ ನೆಲಕ್ಕೆ ಬಿದ್ದಿದ್ದು, ಸಂಭವಿಸಬಹುದಾದ ಭಾರೀ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಉದ್ಯಾನವನದಲ್ಲಿ ಸಾಕಷ್ಟು ಜನ ವಿಶ್ರಾಂತಿಗಾಗಿ ಆಗಮಿಸುತ್ತಾರೆ. ಅಲ್ಲದೇ ಚಿಕ್ಕಮಕ್ಕಳು ಶಿವಾಜಿ ಮೂರ್ತಿ ಆಸುಪಾಸಿನಲ್ಲಿ ಆಟವಾಡುತ್ತಿರುತ್ತಾರೆ. ದೊಡ್ಡ ಮಟ್ಟದ ಅನಾಹುತ ಸಂಭವಿಸಿದ್ದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಶಿವಾಜಿ ಜಯಂತಿಯಂದು ಹುಬ್ಬಳ್ಳಿಯ ಬಹುತೇಕ ಸಂಘಟನೆಗಳು ಶಿವಾಜಿ ಮೂರ್ತಿಯನ್ನು ದುರಸ್ಥಿಗೊಳಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರೂ ಕೂಡ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಇದಕ್ಕೆ ಕಾರಣವಾಗಿದೆ.
ಈ ಹಿಂದೆ ಹಲವು ಬಾರಿ ಅವ್ಯವಸ್ಥೆ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ನಿರ್ಲಕ್ಷ್ಯವಹಿಸಿರುವುದು ಪಾಲಿಕೆ ಅಧಿಕಾರಿಗಳ ನಿಷ್ಕಾಳಜಿಗೆ ಹಿಡಿದ ಕೈಗನ್ನಡಿ. ಮೂರ್ತಿ ಬೀಳುತ್ತಿದ್ದಂತೆ ಸ್ಥಳಕ್ಕಾಗಮಿಸಿದ ವಿವಿಧ ಸಂಘಟನೆಯ ಮುಖಂಡರು ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.