ಹುಬ್ಬಳ್ಳಿ:ಬಿಜೆಪಿಯಿಂದ ಈ ಬಾರಿ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡುವಂತೆ ಕೇಂದ್ರ ಹಾಗೂ ರಾಜ್ಯದ ವರಿಷ್ಠರ ಮೇಲೆ ಒತ್ತಡ ಹೇರುತ್ತೇವೆ. ಹೀಗಾಗಿ ಮತದಾರರು ಲಿಂಗಾಯತ ನಾಯಕರನ್ನು ಹಚ್ಚೆಚ್ಚು ಆಯ್ಕೆ ಮಾಡಬೇಕು ಎಂದು ಸಚಿವ ಶಂಕರಪಾಟೀಲ ಮುನೇನಕೊಪ್ಪ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ನವರು ಲಿಂಗಾಯತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎನ್ನುವುದು ಅಪ್ರಸ್ತುತ. ಈ ಹಿಂದೆ ಕಾಂಗ್ರೆಸ್ನವರು ಲಿಂಗಾಯತ ನಾಯಕರಾದ ವೀರೇಂದ್ರ ಪಾಟೀಲ್ ಅವರನ್ನು ನಡೆಸಿಕೊಂಡ ರೀತಿ ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ನವರು ಬಿಜೆಪಿ ಲಿಂಗಾಯತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಹೇಳುತ್ತಾ ಅಹಿಂದ ಸಿದ್ಧಾಂತವನ್ನು ಕೈಗೊಂಡು, ಅಹಿಂದ ವರ್ಗದವರಿಗೂ ಯಾವುದೇ ಯೋಜನೆ ನೀಡದೇ ಮತ್ತು ಮತ ಬ್ಯಾಂಕ್ಗಾಗಿ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡುತ್ತಾ ಬಂದಿದ್ದಾರೆ ಎಂದು ಹರಿಹಾಯ್ದರು.
ಇದನ್ನೂ ಓದಿ:ಸಿದ್ದರಾಮಯ್ಯ, ಡಿಕೆಶಿಯನ್ನು ನಾವು ಜೈಲಿಗೆ ಹಾಕಲು ಆಗುತ್ತಾ, ಎಲ್ಲದಕ್ಕೂ ಸಮಯ ಬರಬೇಕು: ಈಶ್ವರಪ್ಪ ಗರಂ
ಕಾಂಗ್ರೆಸ್ನವರು ಇಷ್ಟು ವರ್ಷಗಳ ಕಾಲ ಕೇವಲ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆಯೇ ಹೊರತು ಅಭಿವೃದ್ಧಿ ಕಾರ್ಯ ಮಾಡಿಲ್ಲ. ಆದರೆ, ನಮ್ಮ ಬಿಜೆಪಿ ಡಬಲ್ ಎಂಜಿನ್ ಸರ್ಕಾರ ವಿವಿಧ ಜನಪರ ಯೋಜನೆಗಳನ್ನು ಜನರಿಗೆ ನೀಡಿದೆ ಎಂದು ಸಮರ್ಥಿಸಿಕೊಂಡರು. ಲಿಂಗಾಯತರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎನ್ನುವ ಕಾಂಗ್ರೆಸ್ ಈ ಹಿಂದೆ ಲಿಂಗಾಯತ ಧರ್ಮವನ್ನು ಒಡೆಯಲು ಮುಂದಾಗಿತ್ತು. ಹೀಗಾಗಿ ಹೀನಾಯ ಸೋಲು ಅನುಭವಿಸಿತು. ನಾವು ಕೂಡಾ ಈ ಬಾರಿ ಬಹುತೇಕ ಲಿಂಗಾಯತರಿಗೆ ಟಿಕೆಟ್ ನೀಡಿದ್ದೇವೆ. ಜೊತೆಗೆ ಅಭ್ಯರ್ಥಿ ಪಟ್ಟಿ ಹೊಸಬರಿಂದ ತುಂಬಿದೆ ಎಂದು ಹೇಳಿದರು.