ಹುಬ್ಬಳ್ಳಿ :ಕೇಂದ್ರ ಸರ್ಕಾರ ದೇಶ ವ್ಯಾಪಿ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡುತ್ತಿದೆ. ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ವಿದ್ಯಾರ್ಥಿಗಳು ಪೋಷಕರ ಮನವೊಲಿಸಬೇಕು ಎಂದು ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದ್ದಾರೆ.
ಚಳ್ಳಮಟ್ಟಿ ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಸಚಿವ ಮುನೇನಕೊಪ್ಪ.. ಕಲಘಟಗಿ ತಾಲೂಕಿನ ಚಳ್ಳಮಟ್ಟಿ ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೊರೊನಾದಿಂದಾಗಿ ಮಕ್ಕಳ ಶಿಕ್ಷಣಕ್ಕೆ ತುಂಬಾ ತೊಂದರೆಯಾಗಿತ್ತು.
ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಇಂದು ನಮ್ಮ ಸರ್ಕಾರ ಶಾಲೆ ಆರಂಭಿಸಿದೆ. 9,10,11,12ನೇ ತರಗತಿಗಳು ಇಂದಿನಿಂದ ಪ್ರಾರಂಭವಾಗಿವೆ. ಚಳ್ಳಮಟ್ಟಿ ಸರ್ಕಾರಿ ಶಾಲೆಯ 123 ವಿದ್ಯಾರ್ಥಿಗಳ ಪೈಕಿ 104 ಜನ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದಾರೆ ಎಂದರು.
ಇನ್ನು, ಶಿಕ್ಷಣ ತಜ್ಞರ ಹಾಗೂ ವೈದ್ಯರ ಸಲಹೆಗಳ ಮೇರೆಗೆ ಸರ್ಕಾರ ಶಾಲೆಗಳಲ್ಲಿ ಹಂತ ಹಂತವಾಗಿ ತರಗತಿ ಆರಂಭ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಸಂಬಂಧಿಸಿದ ತಜ್ಞರ ಸಲಹೆ, ಸೂಚನೆ ಆಲಿಸಿ ಉಳಿದಂತಹ ತರಗತಿಗಳನ್ನು ಆರಂಭ ಮಾಡಲಾಗುತ್ತದೆ ಎಂದರು.
ಶಾಲಾ ಶಿಕ್ಷಕರು ಸೇರಿದಂತೆ ಸಿಬ್ಬಂದಿಗೂ ಈಗಾಗಲೇ ಲಸಿಕೆ ನೀಡಲಾಗುತ್ತಿದೆ. ಇದರ ಜೊತೆಗೆ ಪೋಷಕರು ಸಹ ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾಗಿ ಸಚಿವರು ತಿಳಿಸಿದರು.
ದಾನಿಗಳನ್ನು ಸನ್ಮಾನಿಸಿದ ಡಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸುಗಮ, ಸುರಕ್ಷಿತ ಕಲಿಕೆಗೆ ಒತ್ತು ನೀಡಲು ಜಿಲ್ಲಾಧಿಕಾರಿ ಕರೆ
ಹುಬ್ಬಳ್ಳಿಯ ನವನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿಂದು 9 ರಿಂದ 12ನೇ ತರಗತಿಗಳ ಪುನಾರಂಭ ಮಾಡಲಾಗಿದೆ. ಮಾಸ್ಕ್ ವಿತರಿಸಿ, ಹೂವು ನೀಡಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿ, ಸುಮಾರು ಒಂದೂವರೆ ವರ್ಷದ ನಂತರ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಪದೇಪದೆ ಸೋಪಿನಿಂದ ಕೈ ತೊಳೆಯುವುದು, ಸ್ಯಾನಿಟೈಸರ್ ಬಳಸುವುದು, ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.
ದಾನಿಗಳಿಗೆ ಸನ್ಮಾನ
ಶಾಲೆಯ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಪ್ರಯೋಗಾಲಯಗಳು, ಗ್ರಂಥಾಲಯ ಅಭಿವೃದ್ಧಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲು ಠೇವಣಿ ಸೇರಿ ಒಟ್ಟು 5 ಲಕ್ಷ ರೂ. ಕಾಣಿಕೆ ನೀಡಿದ ಗಾಮನಗಟ್ಟಿಯ ವಿರೇಶಶಾಸ್ತ್ರಿ ಶಾಸ್ತ್ರಿಮಠ, ಅನ್ನಪೂರ್ಣ ಶಾಸ್ತ್ರಿಮಠ ದಂಪತಿಗೆ ಜಿಲ್ಲಾಧಿಕಾರಿಗಳು ಸನ್ಮಾನಿಸಿದರು.
ಜಿಲ್ಲೆಯ 108 ಸರ್ಕಾರಿ,146 ಅನುದಾನಿತ ಹಾಗೂ 162 ಅನುದಾನರಹಿತ ಸೇರಿ ಒಟ್ಟು 416 ಪ್ರೌಢಶಾಲೆಗಳ 9ನೇ ತರಗತಿಯ 30,805 ಹಾಗೂ 10ನೇ ತರಗತಿಯ 33,148 ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಿದ್ದಾರೆ. 27 ಸರ್ಕಾರಿ, 39 ಅನುದಾನಿತ ಹಾಗೂ 110 ಅನುದಾನರಹಿತ ಸೇರಿ 176 ಪದವಿಪೂರ್ವ ಕಾಲೇಜುಗಳು ಪುನಾರಂಭವಾಗಿವೆ.