ಹುಬ್ಬಳ್ಳಿ :ಸರ್ಕಾರದ ಸೇವೆಗಳು ನಾಗರಿಕರ ಮನೆ ಬಾಗಿಲಿಗೆ ತಲುಪುವಂತೆ ಕಾರ್ಯ ನಿರ್ವಹಿಸುವ ಉದ್ದೇಶದಿಂದ ಸೇವಾ ಸಿಂಧು ಯೋಜನೆ ಜಾರಿಗೆ ತಂದಿದೆ. ಆದರೆ, ನಗರದಲ್ಲಿ ಕಳೆದ ಕೆಲವು ದಿನಗಳಿಂದ ಸೇವಾ ಸಿಂಧು ಕೇಂದ್ರ ತನ್ನ ಕೆಲಸ ನಿಲ್ಲಿಸಿದ ಪರಿಣಾಮ ಸಾರ್ವಜನಿಕರು ತೊಂದರೆಗೊಳಗಾಗಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಸೇವೆಗಳಾದ ಆಧಾರ್, ಇನ್ಸೂರೆನ್ಸ್, ಬ್ಯಾಂಕಿಂಗ್, ಪಾನ್‌ಕಾರ್ಡ್, ಆರೋಗ್ಯ ಕಾರ್ಡ್ಗಳ ಅನುಕೂಲ ಪಡೆಯಲು ಸಾರ್ವಜನಿಕರು ಸರ್ಕಾರಿ ಕಚೇರಿಗೆ ತೆರಳುವ ಅಗತ್ಯವಿರಲಿಲ್ಲ. ನೇರ ಆನ್‌ಲೈನ್ ಸೆಂಟರ್ ಮೂಲಕ ಇವೆಲ್ಲ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದರು. ಆದ್ರೀಗ ಸೇವಾ ಸಿಂಧು ಯೋಜನೆಯ ಸೇವಾ ಕೇಂದ್ರ ಸರ್ಕಾರದ ಸಿಎಸ್‌ಕೆ (ಸೆಂಟ್ರಲ್ ಸೇವಾ ಕೇಂದ್ರ) ವ್ಯಾಲೆಟ್ಗೆ ಲಿಂಕ್ ಆಗಿದೆ. ಈವರೆಗೂ ತಾಂತ್ರಿಕ ಸಮಸ್ಯೆ ಬಗೆ ಹರಿಯದೇ ಇರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.