ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ವಾಹನ ಶೋ ರೂಂ ವಿರುದ್ಧ ಸರ್ಕಾರಿ ಆಸ್ತಿಯನ್ನು ಒತ್ತುವರಿ ಮಾಡಿಕೊಂಡ ಆರೋಪ ಕೇಳಿ ಬಂದಿದೆ. ಅಲ್ಲದೇ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಹುಬ್ಬಳ್ಳಿಯ ಉಣಕಲ್ ಗ್ರಾಮದ ಬಳಿ ಇರುವ ಬೆಲ್ಲದ ಶೋ ರೂಂ ಮಹಾನಗರ ಪಾಲಿಕೆ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇಲ್ಲಿರುವ ನಾಲಾವನ್ನು (ಚರಂಡಿ) ಅತಿಕ್ರಮಣ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.
ಉಣಕಲ್ ಗ್ರಾಮದ ಸರ್ವೇ ನಂ. 6/1ಬಿ2 ಹಾಗೂ 6/1ಬಿ3ರಲ್ಲಿ ಹಾದು ಹೋಗಿರುವ ಮಹಾನಗರ ಪಾಲಿಕೆಯ ನಾಲಾ(ಚರಂಡಿ) ಜಾಗವನ್ನು ಬೆಲ್ಲದ ಶೋರೂಂನವರು ಒತ್ತುವರಿ ಮಾಡಿರುವ ಬಗ್ಗೆ ಹೈಕೋರ್ಟ್‌ನಲ್ಲಿ ದೂರು ದಾಖಲಾಗಿದೆ. ಈ ಕುರಿತು ಹೈಕೋರ್ಟ್‌ನಿಂದ ಮಹಾನಗರ ಪಾಲಿಕೆಗೆ ನೋಟಿಸ್ ಜಾರಿಯಾಗಿದೆ.
ದೂರು ಸಲ್ಲಿಸಿದ ಶಿವಗಿರಿ ಪ್ರದೇಶದ ಅಶೋಕ ದ್ಯಾವನಗೌಡ್ರ, ಡಿ.ಕೆ. ಕಲಬುರ್ಗಿ ಸಹಿತ ಐವರು ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಹಾಗೆ ಬೆಲ್ಲದ ಶೋರೂಂನ ಅಧಿಕಾರಿಗಳೂ ಸಹ ತಮ್ಮ ಹೇಳಿಕೆ ದಾಖಲಿಸಿದ್ದಾರೆ.