ಹುಬ್ಬಳ್ಳಿ :2023 ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿಕಾಂಗ್ರೆಸ್ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಅತೀ ಹೆಚ್ಚು ಜನ ಲಿಂಗಾಯತ ಶಾಸಕರು ಆಯ್ಕೆಯಾಗಿದ್ದಾರೆ. ಹೀಗಾಗಿ ಲಿಂಗಾಯತರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಿತ್ತು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಡಾ. ಎಸ್ ಜಿ ಜಾಮದಾರ್ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 1871ರಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಆದೇಶವಾಗಿತ್ತು. ನಂತರ 1901ನೇ ಗಣತಿಯಲ್ಲಿ ಇದರ ವಿರುದ್ಧ ಕೆಲಸಗಳಾದವು. ಇದಾದ ಮೇಲೆ ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಯೂ ಆಗ ಮುಖ್ಯಮಂತ್ರಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಸಿಗುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆ ಕುರಿತು ಪ್ರಸ್ತಾಪವನ್ನು ಕೇಂದ್ರಕ್ಕೆ ಕಳುಹಿಸಿದಾಗ ವಾಪಸ್ ಕಳಿಸಿದ್ದಕ್ಕೆ ಮೂರು ಕಾರಣ ಕೊಟ್ಟಿದೆ.
ನಂತರ ಬಂದ ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಆಗಿನ ಚಳವಳಿ ಪರಿಣಾಮ ಇದೀಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಈ ಮೂಲಕ ಧರ್ಮದ ಪ್ರಸ್ತಾವವನ್ನು ಪುನರ್ ಪರಿಶೀಲನೆಗೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಿ ಎಂದು ಒತ್ತಾಯಿಸುತ್ತೇವೆ. ಅಗತ್ಯ ಇದ್ದರೆ ನಿಯೋಗ ಹೋಗುತ್ತೇವೆ ಎಂದು ಡಾ. ಎಸ್.ಜಿ ಜಾಮದಾರ್ ಹೇಳಿದರು.
ಕಳೆದ ಬಾರಿ ಬಿಜೆಪಿ ಅಧಿಕಾರ ಅವಧಿಯಲ್ಲಿ ಲಿಂಗಾಯತರಿಗೆ ಅಧಿಕಾರ ಸಿಕ್ಕಿದೆ. ನಮ್ಮ ಸಮುದಾಯದ 37 ಶಾಸಕರನ್ನು ಹಾಗೂ 27 ಶಾಸಕರು ಪರಿಶಿಷ್ಟ ಸಮುದಾಯದಿಂದ ಚುನಾಯಿತರಾಗಿದ್ದು, ಇದರಿಂದ ಅಧಿಕಾರ ಕಾಂಗ್ರೆಸ್ ಪರವಾಗಿದೆ. ಹೀಗಿದ್ದರೂ, ಡಿಸಿಎಂ ಹುದ್ದೆ ಒಂದೇ ಯಾಕೆ ಇದೆ? ಲಿಂಗಾಯತರು, ಪರಿಶಿಷ್ಟರು ಹಾಗೂ ಮುಸಲ್ಮಾನರನ್ನು ಸಹ ಪರಿಗಣಿಸಬಹುದಿತ್ತಲ್ಲವೆ. ಕಾಂಗ್ರೆಸ್ ಈ ಬಗ್ಗೆ ಗಮನ ಹರಿಸಬೇಕು. ಇಲ್ಲದಿದ್ದರೆ ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಎದುರಿಸಬೇಕಾಗುತ್ತದೆ ಎಂದು ಡಾ. ಎಸ್.ಜಿ ಜಾಮ್ದಾರ್ ಎಚ್ಚರಿಸಿದರು.
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಜಗದೀಶದ ಶೆಟ್ಟರ್ ಅವರನ್ನು ಬಿಜೆಪಿ ಮತ್ತು ಆರ್ಎಸ್ಎಸ್ ನಡೆಸಿಕೊಂಡ ರೀತಿ ಹೇಗಿದೆ ಎಂದು ಗೊತ್ತಿದೆ. ಲಿಂಗಾಯತ ಸಂಘಟನೆಗಳ ಎಲ್ಲಾ ಸಮುದಾಯದ ಸ್ವಾಮೀಜಿಗಳ ಬೆಂಬಲ ನನಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಅದು ಲಿಂಗಾಯತರಲ್ಲ. ಬದಲಿಗೆ ವೀರಶೈವ ಪಂಚಪೀಠಗಳ ನಾಲ್ಕು ಸ್ವಾಮೀಜಿಗಳು . ಈ ನಾಲ್ಕು ಸ್ವಾಮಿಗಳ ಬೆಂಬಲದಿಂದಾಗಿ ಇಡೀ ಲಿಂಗಾಯತ ಸಮುದಾಯ ನನ್ನ ಬೆಂಬಲಕ್ಕಿದೆ ಎಂದು ಡಿಕೆಶಿ ಹೇಳುತ್ತಿದ್ದಾರೆ. ಅವರ ಬಗ್ಗೆ ಮಾತಾಡುವ ಹಕ್ಕು ನಿಮಗಿಲ್ಲ ಎಂದು ಡಾ. ಎಸ್.ಜಿ ಜಾಮದಾರ್ ಕಿಡಿಕಾರಿದರು.
ಸಿದ್ದರಾಮಯ್ಯ, ಎಂ.ಬಿ. ಪಾಟೀಲ್ ಅವರನ್ನು ಹಣಿಯಲು ಡಿ.ಕೆ ಶಿವಕುಮಾರ್ ಒಂದೆ ಡಿಸಿಎಂ ಸ್ಥಾನ ಬೇಕು ಎಂದು ಈ ರೀತಿ ಮಾಡುತ್ತಿದ್ದಾರೆ.
ಡಿಸಿಎಂ ಹುದ್ದೆಗೆ ಉಳಿದ ಸಮುದಾಯದವರು ಅರ್ಹರಿಲ್ಲವೆ? ಲಿಂಗಾಯತ ಸಮುದಾಯಕ್ಕೆ ಕೊಡದಿದ್ದರೆ ಅನ್ಯಾಯವಾಗುತ್ತದೆ. ನಾವು ಜಾತಿ ಬಿಟ್ಟು, ಸಂಖ್ಯೆ ಆಧಾರದಲ್ಲಿ ಕೇಳುತ್ತಿದ್ದೇವೆ. ವೀರಶೈವರ ಬಗ್ಗೆ ಏನಾದರೂ ಹೇಳಿ. ಆದರೇ ಲಿಂಗಾಯತರ ಬಗ್ಗೆ ಮಾತಾಡುವ ನೈತಿಕ ಹಕ್ಕಿಲ್ಲ. ಪ್ರತ್ಯೇಕ ಲಿಂಗಾಯತ ಧರ್ಮದ ಸಾಮಾಜಿಕ ಚಳವಳಿ ಆಗಬೇಕು ಎಂದು ಅವರು ಇದೇ ವೇಳೆ ಪ್ರತಿಪಾದಿಸಿದರು.
ಇದನ್ನೂ ಓದಿ :ಕಾಂಗ್ರೆಸ್ ಶಾಸಕಾಂಗ ಸಭೆಗೂ ಮುನ್ನ ಡಿಸಿಎಂ ಹಾಗೂ ಸಚಿವ ಸ್ಥಾನ ಆಕಾಂಕ್ಷಿ ಶಾಸಕರು ಹೇಳಿದ್ದೇನು?!