ಹುಬ್ಬಳ್ಳಿ: ಭಾರತ್ ಜೋಡೋ ಯಾತ್ರೆಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಸಿಗುತ್ತಿರುವ ಜನ ಬೆಂಬಲ ಕಂಡು ಬಿಜೆಪಿಯವರು ಹೆದರಿ ಕೋವಿಡ್ ನೆಪ ಒಡ್ಡುತ್ತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆ ಮಾಡುವಾಗಲೂ ಬಿಜೆಪಿಯವರು ಕೋವಿಡ್ ನೆಪ ಒಡ್ಡಿದ್ದರು. ಇದೀಗ ಭಾರತ್ ಜೋಡೋ ಯಾತ್ರೆ ನಿಲ್ಲಿಸುವುದಾಗಿ ತಿಳಿಸಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಸಹಕಾರ ಸಚಿವರು ಡಮ್ಮಿ ಮಂತ್ರಿಯಾಗಿದ್ದಾರೆಂದು ಸಿಡಿಮಿಡಿಗೊಂಡರು.
ಭಾರತ್ ಜೋಡೋ ಯಾತ್ರೆಯ ಬೆಂಬಲ ಕಂಡು ಬಿಜೆಪಿಯವರು ಕೋವಿಡ್ ಭೀತಿ ಶುರು ಮಾಡಿದ್ದಾರೆ; ಡಿಕೆ ಶಿವಕುಮಾರ್ ಒಂದೇ ಒಂದು ಎಪಿಎಂಸಿ ಹಾಗೂ ರೈತರಿಗೆ ಸಹಾಯ ಮಾಡುವಲ್ಲಿ ಅವರು ವಿಫಲರಾಗಿದ್ದಾರೆ. ಡಿಸಿಸಿ ಬ್ಯಾಂಕ್ ಗಳ ಜೊತೆಗೆ ಹೊಂದಾಣಿಕೆಯ ರಾಜಕೀಯ ಮಾಡುತ್ತಿದ್ದಾರೆ. ಸಚಿವರು, ಶಾಸಕರ ಕುಮ್ಮಕ್ಕಿನಿಂದ ಲೂಟಿ ಹೊಡೆಯುವ ತಂತ್ರಗಾರಿಕೆ ನಡೆಯುತ್ತಿದೆ. ರೈತರಿಗೆ ಅನುಕೂಲದ ಬದಲು ಬಿಜೆಪಿ ನಾಯಕರ ಆಸ್ತಿ ಖರೀದಿಗೆ ಸೌಹಾರ್ದ ಬ್ಯಾಂಕುಗಳ ರಕ್ಷಣೆಗೆ ನಿಂತಿದ್ದಾರೆ ಎಂದು ಡಿಕೆಶಿ ಆರೋಪಿಸಿದರು.
ಬೆಂಗಳೂರು, ಬೆಳಗಾವಿ, ಬಾಗಲಕೋಟೆ, ವಿಜಯಪುರದ, ಸಹಕಾರಿ ಮತ್ತು ಅಪೆಕ್ಸ್ ಬ್ಯಾಂಕುಗಳಲ್ಲಿ ಕಾನೂನು ನಿಯಮ ಮೀರಿ ಸಾಲ ಕೊಡುತ್ತಿದ್ದಾರೆ. ಎಲ್ಲ ಪರ್ಸಂಟೇಜ್ ವ್ಯವಹಾರ ನಡೆಯುತ್ತಿದೆ. ಇದು ಸುಳ್ಳಾದರೇ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಿ ಎಂದು ಡಿ ಕೆ ಶಿವಕುಮಾರ್ ಸವಾಲ್ ಹಾಕಿದರು.
ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಪಂಚಮಸಾಲಿ, ಒಕ್ಕಲಿಗರು ಮತ್ತು ಎಸ್ಟಿಗಳೂ ಸಹ ಮೀಸಲಾತಿಗೆ ಗಡುವು ನೀಡಿದ್ದಾರೆ. ಅವರ ಹಕ್ಕುಗಳಿಗೆ ನಮ್ಮದೇನು ತಕರಾರು ಇಲ್ಲ ಎಂದರು.
ಆಪ್ತರೊಂದಿಗೆ ಸುಧೀರ್ಘ ಚರ್ಚೆ:ಅಧಿವೇಶನದ ಸಮಯದಲ್ಲೇಕೆಪಿಸಿಸಿ ಅಧ್ಯಕ್ಷರು ಹುಬ್ಬಳ್ಳಿಗೆ ಆಗಮಿಸಿದ ವೇಳೆ ವಿಮಾನ ನಿಲ್ದಾಣದಲ್ಲಿಯೇ ಕಾಂಗ್ರೆಸ್ ಮುಖಂಡರ ಜೊತೆಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಇನ್ನು, ಸಭೆಯಲ್ಲಿ ಆಪ್ತ ಯು.ಬಿ ಶೆಟ್ಟಿ, ಷಣ್ಮುಖ ಶಿವಳ್ಳಿ ಸೇರಿ ಕೆಲ ಆಪ್ತರ ಜೊತೆ ಡಿಕೆ ಶಿವಕುಮಾರ್ ಚರ್ಚೆ ಮಾಡಿದ್ದಾರೆ. ಈ ಚರ್ಚೆ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಡೆಪ್ಟೇಷನ್ ಪದ್ದತಿಗೆ ಇನ್ಮುಂದೆ ಕಠಿಣ ನಿಯಮ, ಮಾತೃ ಇಲಾಖೆಯಲ್ಲೇ ಕೆಲಸ ಮಾಡುವಂತೆ ಕ್ರಮ: ಸಿಎಂ