ಮೊದಲ ದಿನ ಮಕ್ಕಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದ ಆಡಳಿತ ಮಂಡಳಿ ಹುಬ್ಬಳ್ಳಿ:ಮಕ್ಕಳ ಬೇಸಿಗೆ ರಜೆ ಮುಗಿಯಿತು. ರಜೆ ಮುಗಿಸಿ ಮಕ್ಕಳು ಶಾಲೆಯತ್ತ ತೆರಳಲು ಕೊಂಚ ಹಿಂಜರಿಕೆ ಮಾಡುತ್ತಿದ್ದು, ಮಕ್ಕಳನ್ನು ಶಾಲೆಯತ್ತ ಸೆಳೆಯಲು ಶಾಲೆ ಬೋಧಕ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ನೂತನ ರೀತಿಯಲ್ಲಿ ಪ್ರಯೋಗಗಳನ್ನು ಕೈಗೆತ್ತಿಕೊಳ್ಳುತ್ತಿವೆ. ಹುಬ್ಬಳ್ಳಿಯ ಬಸವ ಕೇಂದ್ರ ಶಾಲೆಯು ಶೈಕ್ಷಣಿಕ ವರ್ಷಕ್ಕೆ ಮಕ್ಕಳನ್ನು ವಿನೂತನ ರೀತಿಯಲ್ಲಿ ಬರಮಾಡಿಕೊಂಡಿದೆ. ಮನೆಗೆ ಬರುವ ಅತಿಥಿಗಳಿಗೆ ಶುಭ ಕೋರಿ ಸ್ವಾಗತಿಸುವ ರೀತಿಯಲ್ಲಿ ಶಾಲೆಯ ಸಿಬ್ಬಂದಿ ಮಕ್ಕಳಿಗೆ ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸುವ ಮೂಲಕ ಶೈಕ್ಷಣಿಕ ವರ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಇನ್ನೂ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಮಾತ್ರವಲ್ಲದೇ ಧಾರವಾಡ ಜಿಲ್ಲೆಯ ಬಹುತೇಕ ಶಾಲೆಯಲ್ಲಿ ಮಕ್ಕಳನ್ನು ಶೈಕ್ಷಣಿಕ ವರ್ಷದ ಆರಂಭದ ದಿನವಾದ ಇಂದು ಆತ್ಮೀಯವಾಗಿ ಸ್ವಾಗತಿಸಿದೆ. ಸುಮಾರು ಎರಡು ತಿಂಗಳ ಕಾಲ ಮನೆಯ ಅಂಗಳದಲ್ಲಿ ಆಡಿದ ಮಕ್ಕಳು ಈಗ ಮತ್ತೆ ಶಾಲೆಯತ್ತ ಮುಖ ಮಾಡುತ್ತಿದ್ದಾರೆ. ಹೊಸದಾಗಿ ಒಂದನೇ ತರಗತಿಗೆ ಸೇರಿದ ಮಕ್ಕಳನ್ನು ಕೂಡ ಶಾಲಾ ವಾತಾವರಣಕ್ಕೆ ಸ್ವಾಗತಿಸಲಾಯಿತು.
ಇದನ್ನೂ ಓದಿ:ಟೆಂಡರ್ ಪ್ರಕ್ರಿಯೆಗೆ ಗುತ್ತಿಗೆದಾರರ ನಿರಾಸಕ್ತಿ: ಜೂನ್ 1ರಿಂದ ಬಿಬಿಎಂಪಿ ಶಾಲೆಗಳಲ್ಲಿ ಹೊರಗುತ್ತಿಗೆ ಶಿಕ್ಷಕರು ಗೈರಾಗುವ ಆತಂಕ
ಮೇ 28ಕ್ಕೆ ಬೇಸಿಗೆ ರಜೆ ಕೊನೆಗೊಂಡಿದ್ದು, ರಾಜ್ಯದಲ್ಲಿ ಇಂದಿನಿಂದ ಎಲ್ಲ ಶಾಲೆಗಳು ಪ್ರಾರಂಭಗೊಂಡಿದೆ. ಬೇಸಿಗೆ ರಜೆ ಮುಗಿದು ಮಕ್ಕಳೆಲ್ಲ ಬ್ಯಾಗ್ ಬೆನ್ನಿಗೇರಿಸಿಕೊಂಡು ಶಾಲೆಗೆ ಹೊರಟಿದ್ದಾರೆ. ಈಗಾಗಲೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2023- 24 ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆಗೊಳಿಸಿದೆ. ಆ ಪಟ್ಟಿಯಲ್ಲಿ ಮಕ್ಕಳಿಗೆ ಮೇ 8 ರಿಂದ ದಸರಾ ರಜೆ ಹಾಗೂ 2024 ರ ಏಪ್ರಿಲ್ 11 ರಿಂದ ಬೇಸಿಗೆ ರಜೆ ಘೋಷಣೆ ಮಾಡಲಾಗಿದೆ.
ರಾಜ್ಯಾದ್ಯಂತ ಏಕರೂಪದ ಶಿಕ್ಷಣ ಯಶಸ್ವಿ ಅನುಷ್ಠಾನಕ್ಕಾಗಿ ವಾರ್ಷಿಕ ಮಾರ್ಗಸೂಚಿಯನ್ನು ಇಲಾಖೆ ಸಿದ್ಧಪಡಿಸಿದೆ. ಅದರ ಪ್ರಕಾರವೇ ಪಾಠ ಹಂಚಿಕೆ, ಪಠ್ಯೇತರ ಚಟುವಟಿಕೆಗಳು, ಪರೀಕ್ಷೆ, ಮೌಲ್ಯಾಂಕನ, ಫಲಿತಾಂಶಮುಖಿ ಚಟುವಟಿಕೆಗಳು, ಸಿಸಿ ಚಟುವಟಿಕೆಗಳು ಹೀಗೆ ಎಲ್ಲವನ್ನೂ ನಿರ್ವಹಿಸಲು ಸಹಾಯವಾಗುವಂತೆ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿಯನ್ನು ಶಾಲಾ ಶಿಕ್ಷಣ ಇಲಾಖೆ ಸಿದ್ಧಪಡಿಸಿದೆ. ರಾಜ್ಯದಲ್ಲಿರುವ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಏಕರೂಪದ ಶಿಕ್ಷಣ ಚಟುವಟಿಕೆಗಳನ್ನು ಜಾರಿಗೊಳಿಸಲು ಸಹಾಯವಾಗುವಂತೆ ಶೈಕ್ಷಣಿಕ ಅವಧಿಗಳು, ರಜಾ ದಿನಗಳು ಹಾಗೂ ವಾರ್ಷಿಕ ಮಾರ್ಗಸೂಚಿಯನ್ನು ಇಲಾಖೆ ನಿಗದಿಪಡಿಸಿದೆ.
ಈಗಾಗಲೇ ಹಲವು ಖಾಸಗಿ ಶಾಲೆಗಳು ತರಗತಿಗಳನ್ನು ಆರಂಭಿಸಿವೆ. ಇಂದು ಮತ್ತು ನಾಳೆ ಶಾಲೆ ಸ್ವಚ್ಛಗೊಳಿಸಲು ಹಾಗೂ ಸಣ್ಣಪುಟ್ಟ ದುರಸ್ತಿಗೆ ಅವಕಾಶ ನೀಡಲಾಗಿದ್ದು, 31ರಿಂದ ಸರ್ಕಾರಿ ಶಾಲೆಗಳಲ್ಲಿ ತರಗತಿಗಳು ಆರಂಭವಾಗಲಿವೆ ಎಂದು ಶಿಕ್ಷಣ ಇಲಾಖೆ ಹೇಳಿದೆ.
ಇದನ್ನೂ ಓದಿ:ಮೇ 29 ರಿಂದ ರಾಜ್ಯಾದ್ಯಂತ ಶಾಲೆಗಳು ಪುನಾರಂಭ : ಆಟದಿಂದ ಪಾಠದತ್ತ ಮಕ್ಕಳ ಚಿತ್ತ