ಹುಬ್ಬಳ್ಳಿ:ಕೊರೊನಾ ವೈರಸ್ ವಿರುದ್ಧ ಜಾರಿಯಾಗಿದ್ದ ಲಾಕ್ಡೌನ್ನಿಂದ ಕೈಗಾರಿಕೆಗಳು ಈಗಾಗಲೇ ಹಲವು ದಿನಗಳ ಕಾಲ ಬಂದ್ ಆಗಿದ್ದವು. ಅನ್ಲಾಕ್ ನಂತರ ಚೇತರಿಸಿಕೊಳ್ಳಬೇಕಾಗಿದ್ದ ಕೈಗಾರಿಕೆಗಳು ಇದೀಗ ಮತ್ತೆ ಸ್ಥಗಿತಗೊಳ್ಳುತ್ತಿವೆ. ಕೈಗಾರಿಕೆಗಳ ಉತ್ಪಾದನಾ ಕಾರ್ಯಕ್ಕೆ ಇದೀಗ ಆಕ್ಸಿಜನ್ ಕೊರತೆ ಎದುರಾಗಿದೆ.
ಆಸ್ಪತ್ರೆಗಳಿಗೆ ಆಕ್ಸಿಜನ್ ಪೊರೈಕೆ ಮಾಡಿದರೆ ಕೈಗಾರಿಕೆಗಳಿಗಿಲ್ಲ, ಕೈಗಾರಿಕೆಗಳಿಗೆ ಆಕ್ಸಿಜನ್ ನೀಡಿದರೆ ಆಸ್ಪತ್ರೆಗಳಿಗೆ ಆಕ್ಸಿಜನ್ ಇಲ್ಲದಂತಹ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ. ಹೀಗಾಗಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನೂರಾರು ಕಾರ್ಖಾನೆಗಳಿಗೆ ಆಕ್ಸಿಜನ್ ಕೊರತೆ ಎದುರಾದ ಪರಿಣಾಮ ವಾರದಲ್ಲಿ ಮೂರು ನಾಲ್ಕು ದಿನಗಳಷ್ಟೇ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಆಕ್ಸಿಜನ್ ಇಲ್ಲದೆ ಕೈಗಾರಿಕೆ ನಡೆಸೋದು ಕಷ್ಟ ಅಂತಿದ್ದಾರೆ ಕೈಗಾರಿಕೋದ್ಯಮಿಗಳು.
ಆಕ್ಸಿಜನ್ ಕೊರತೆಯಿಂದ ಕೈಗಾರಿಕೆಗಳು ಸ್ಥಗಿತ ಕೈಗಾರಿಕೆಗಳಲ್ಲಿ ವೆಲ್ಡಿಂಗ್, ಐರನ್ ಕಟಿಂಗ್ ಸೇರಿದಂತೆ ವಿವಿಧ ಕೈಗಾರಿಕಾ ಕಾರ್ಯಗಳಿಗೆ ಆಕ್ಸಿಜನ್ ಬೇಕೇ ಬೇಕು. ಆದರೆ ಅವಳಿನಗರದ ನೂರಾರು ಕಾರ್ಖಾನೆಗಳಿಗೆ ಸರಬರಾಜು ಆಗ್ತಿದ್ದ ಆಕ್ಸಿಜನ್ ಇದೀಗ ಸರಿಯಾಗಿ ಪೊರೈಕೆ ಆಗುತ್ತಿಲ್ಲ. ಹೀಗಾಗಿ ಬಿಡಿ ಭಾಗಗಳ ಉತ್ಪಾದನೆ, ನಿಗದಿತ ವೇಳೆಗೆ ಬೇಡಿಕೆಯಷ್ಟು ಉತ್ಪಾದನೆಗಳ ಸರಬರಾಜು ಮಾಡಲು ಕಾರ್ಖಾನೆಗಳಿಗೆ ಆಗುತ್ತಿಲ್ಲ.
ಧಾರವಾಡ ಜಿಲ್ಲೆಯ ಎಲ್ಲಾ ಕೈಗಾರಿಕೆಗಳು ಹಾಗೂ ಆಸ್ಪತ್ರೆಗಳಿಗೆ ಬಳ್ಳಾರಿ ಹಾಗೂ ಮಹಾರಾಷ್ಟ್ರದಿಂದ ಆಕ್ಸಿಜನ್ ಸಿಲಿಂಡರ್ ಪೊರೈಕೆ ಮಾಡಲಾಗುತ್ತಿತ್ತು. ಆದ್ರೆ ಇದೀಗ ಬಳ್ಳಾರಿ, ಮಹಾರಾಷ್ಟ್ರದಲ್ಲೂ ಕೋವಿಡ್ ರಣಕೇಕೆಯಿಂದ ಅಲ್ಲಿಂದ ಆಕ್ಸಿಜನ್ ಸಿಲಿಂಡರ್ಗಳ ಸರಬರಾಜು ನಿಗದಿತವಾಗಿ ಆಗದಿರುವುದರಿಂದ ಕೈಗಾರಿಕೆಗಳು ಆಕ್ಸಿಜನ್ ಇಲ್ಲದೆ ಬಂದ್ ಆಗಬೇಕಾಗಿದೆ.
ಅಲ್ಲದೆ ಧಾರವಾಡ ಜಿಲ್ಲಾಡಳಿತ ಮೊದಲ ಆದ್ಯತೆ ಮೇರೆಗೆ ಆಸ್ಪತ್ರೆಗಳಿಗೆ ಆಕ್ಸಿಜನ್ ಪೊರೈಕೆ ಮಾಡಬೇಕೆಂದು ಆದೇಶ ಹೊರಡಿಸಿರುವುದರಿಂದ ಕೈಗಾರಿಕೆಗಳು ಆಕ್ಸಿಜನ್ ಇಲ್ಲದೆ ಸ್ಥಗಿತಗೊಳ್ಳುತ್ತಿವೆ. ಈ ಕುರಿತು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರನ್ನು ಪ್ರಶ್ನೆ ಮಾಡಿದ್ರೆ, ಮೊದಲು ಜೀವ ಉಳಿಸಲು ಆಸ್ಪತ್ರೆಗಳಿಗೆ ಆಕ್ಸಿಜನ್ ಪೊರೈಕೆ ಮಾಡಲಾಗುತ್ತಿದೆ. ಕೈಗಾರಿಕೆಗಳಿಗೂ ಆಕ್ಸಿಜನ್ ಪೊರೈಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಲಾಕ್ಡೌನ್ನಿಂದ ಕೈಗಾರಿಕೆಗಳು ಹಾಗೂ ಕೈಗಾರಿಕೋದ್ಯಮಿಗಳು ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಆದ್ರೆ ಇದೀಗ ಕೈಗಾರಿಕೆಗಳಿಗೆ ಆಕ್ಸಿಜನ್ ದೊರೆಯದೆ ಮತ್ತೆ ಕೈಗಾರಿಕೆಗಳನ್ನ ಸ್ಥಗಿತ ಮಾಡಬೇಕಾದ ಪರಿಸ್ಥಿತಿ ಕೈಗಾರಿಕೋದ್ಯಮಿಗಳದ್ದಾಗಿದೆ. ಅಲ್ಲದೆ ಆಸ್ಪತ್ರೆಗಳಿಗೆ ಆಕ್ಸಿಜನ್ ಪೊರೈಕೆ ಮಾಡಲು ಮೊದಲ ಆದ್ಯತೆ ನೀಡಬೇಕಾಗಿರುವುದರಿಂದ ಕೈಗಾರಿಕೆಗಳು ಆಕ್ಸಿಜನ್ ಇಲ್ಲದೆ ಬಂದ್ ಆಗುವಂತಾಗಿದ್ದು ಕೊರೊನಾ ಅಟ್ಟಹಾಸಕ್ಕೆ ಸಾಕ್ಷಿಯಾಗಿದೆ.