ಹುಬ್ಬಳ್ಳಿ :ಧಾರವಾಡ ಜಿಲ್ಲೆ ಸಾಹಿತ್ಯದ ತವರೂರು. ಇಲ್ಲಿ ಇಬ್ಬರೂ ಗಂಧರ್ವರು ಹುಟ್ಟಿರುವುದು ನಿಜಕ್ಕೂ ವಿಶೇಷವಾಗಿದೆ. ಅಲ್ಲದೇ ಕೇಂದ್ರ ಸರ್ಕಾರ ಕೂಡ ನಮ್ಮವರನ್ನು ಗುರುತಿಸುವ ಹಾಗೂ ಅವರ ಸಾಧನೆಯನ್ನು ಸ್ಮರಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹೇಳಿದರು.
ನಗರದಲ್ಲಿಂದು ಸವಾಯಿ ಗಂಧರ್ವರ ಅಂಚೆ ಚೀಟಿ ಬಿಡುಗಡೆಗೊಳಿಸಿ ಕನ್ನಡದಲ್ಲೇ ಬಾಷಣ ಆರಂಭಿಸಿದ ಅವರು, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಬಗ್ಗೆ ಮಾತನಾಡುವುದು ನಮ್ಮ ಸೌಭಾಗ್ಯ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನನ್ನ ಗುರು. ಪಾರ್ಲಿಮೆಂಟ್ ನಡಾವಳಿ ಬಗ್ಗೆ ಜೋಶಿ ನನಗೆ ಕಲಿಸಿಕೊಟ್ಟಿದ್ದಾರೆ. ಲೋಕಸಭೆಯಲ್ಲಿ ಪ್ರತಿಯೊಂದು ಹೆಜ್ಜೆ, ಭಾಷಣ ಮಾಡೋದನ್ನು ಪ್ರಹ್ಲಾದ ಜೋಶಿ ಕಲಿಸಿದ್ದಾರೆ. ಅಧಿಕಾರ, ಸ್ಥಾನ ಬಂದನಂತರ ಮನುಷ್ಯ ಬದಲಾಗುತ್ತಾನೆ. ಆದರೆ ವಿರೋಧ ಪಕ್ಷದ ನಾಯಕರೂ ಪ್ರಹ್ಲಾದ ಜೋಶಿ ಅವರನ್ನು ಗೌರವಿಸುತ್ತಾರೆ ಎಂದರು.
ಸಂಗೀತಕ್ಕಿರುವ ಶಕ್ತಿಯನ್ನು ಸವಾಯಿ ಗಂಧರ್ವರು ಬ್ರಿಟೀಷರಿಗೆ ಪರಿಚಯಿಸಿದ್ದರು. ಕಲೆ, ಸಂಸ್ಕೃತಿ, ಶಿಕ್ಷಣದಿಂದ ಸವಾಯಿ ಗಂಧರ್ವರು ಪರಿಪೂರ್ಣರು. ಡಾ.ಗಂಗೂಬಾಯಿ ಹಾನಗಲ್ ಹಾಗೂ ಪಂ. ಭೀಮಸೇನ ಜೋಶಿಯಂತಹ ಶಿಷ್ಯರನ್ನು ನಾಡಿಗೆ ಕೊಟ್ಟಿದ್ದೇ ಸವಾಯಿ ಗಂಧರ್ವರು ಎಂದು ಅವರು ಅಭಿನಂದನೆ ಸಲ್ಲಿಸಿದರು.