ಸುದ್ದಿಗೋಷ್ಠಿಯಲ್ಲಿ ಶಾಸಕ ಅರವಿಂದ್ ಬೆಲ್ಲದ್ ಮಾತನಾಡಿದರು. ಧಾರವಾಡ:ವಾಣಿಜ್ಯ ಹಾಗೂ ಸಣ್ಣ ಉದ್ಯಮಿದಾರರು ಬಂದ್ಗೆ ಕರೆ ನೀಡಿದ್ದಾರೆ. ವಿದ್ಯುತ್ ದರ ಹೆಚ್ಚಳ ಹಿನ್ನೆಲೆಯಲ್ಲಿ ಅವರು ಉದ್ದಿಮೆ ನಡೆಸಲು ಸಾಧ್ಯವಾಗಲ್ಲ ಎಂದಿದ್ದಾರೆ. ವಿದ್ಯುತ್ ಕಂಪನಿಗಳು ಇನ್ನೂ ವಿದ್ಯುತ್ ದರ ಹೆಚ್ಚಳ ಮಾಡಲು ಬೇಡಿಕೆ ಇಟ್ಟಿವೆ. ಆದರೆ ಕಾಂಗ್ರೆಸ್ ಸರ್ಕಾರ ಕೇಳಿದ್ದಕ್ಕಿಂತ ಹೆಚ್ಚು ವಿದ್ಯುತ್ ದರ ಏರಿಕೆ ಮಾಡಿದೆ ಎಂದು ಶಾಸಕ ಅರವಿಂದ ಬೆಲ್ಲದ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ವಿದ್ಯುತ್ ದರ ಏರಿಕೆಯಿಂದ ಉದ್ಯಮಗಳು ಅನ್ಯ ರಾಜ್ಯಕ್ಕೆ ಹೋಗುತ್ತವೆ ಎಂಬ ವಿಚಾರಕ್ಕೆ, ಅನ್ಯ ರಾಜ್ಯಕ್ಕೆ ಹೋಗಲು ಅವು ಡಬ್ಬಾ ಅಂಗಡಿ ಅಲ್ಲ ಅಂತಾ ಸತೀಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ಸತೀಶ ಜಾರಕಿಹೊಳಿ ಸಹ ಒಬ್ಬ ಉದ್ಯಮಿ. ಅವರಿಂದ ಈ ಮಾತು ನಿರೀಕ್ಷೆ ಮಾಡಿರಲಿಲ್ಲ. ಬೇಜವಾಬ್ದಾರಿ ಹೇಳಿಕೆ ಸರಿಯಲ್ಲ. ಉಡಾಫೆ ಉತ್ತರ ಕೊಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೈಗಾರಿಕೆಗಳು, ಸಣ್ಣ ಉದ್ದಿಮೆ, ವ್ಯಾಪಾರಸ್ಥರಿಗೆ ಹೊರೆ ಆಗದಂತೆ ವಿದ್ಯುತ್ ದರ ಇರಬೇಕು. ಚುನಾವಣೆ ವೇಳೆ ಕಾಂಗ್ರೆಸ್ ಗ್ಯಾರಂಟಿ ಘೋಷಿಸಿದಂತೆ 200 ಯುನಿಟ್ ವಿದ್ಯುತ್ ಉಚಿತವಾಗಿ ಜನರಿಗೆ ನೀಡಬೇಕು. ಬಸ್ ಉಚಿತ ಕೊಟ್ಟಿದ್ದಕ್ಕೆ ಸ್ವಾಗತ. ಆದರೆ ವಿದ್ಯಾರ್ಥಿಗಳಿಗೆ ಉಚಿತ ಕೊಡಬೇಕು. ಎಲ್ಲ ಮಹಿಳೆಯರು ಉಚಿತ ಹೋಗುತ್ತಿರುವುದರಿಂದ ಕ್ಯಾಬ್ ಹಾಗೂ ಆಟೋ ಮಾಲೀಕರಿಗೆ ನಷ್ಟ ಆಗುತ್ತಿದೆ. ಸರ್ಕಾರಕ್ಕೆ ಆಟೋ ಕ್ಯಾಬ್ನವರಿಗೆ ತಿಂಗಳಿಗೆ 10,000 ಸಾವಿರ ರೂ ಕೊಡಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ಉಚಿತವಾಗಿ ನೀಡುವುದನ್ನು ಸ್ವಾಗತಿಸುತ್ತೇವೆ. ಆದರೆ ಮೊದಲಿನ ಬಿಲ್ ಮೇಲೆ ಹೆಚ್ಚು ದರ ಏರಿಕೆ ಮಾಡಲಾಗಿದೆ. ಮೊದಲು ನಮ್ಮ ಸರ್ಕಾರದಲ್ಲಿ ಕಡಿಮೆ ದರ ಇತ್ತು. 290 ಕೆವಿ ಕೈಗಾರಿಕೆಗೆ ಬೇಕು ಎಂದು ಬೇಡಿಕೆ ಇತ್ತು. ಸರ್ಕಾರ 260 ಯುನಿಟ್ ನಿಗದಿ ಮಾಡಿದೆ. ವಿದ್ಯುತ್ ದರ ಏರಿಕೆ ಖಂಡಿಸಿ ರಾಜ್ಯಾದ್ಯಂತ ಬಂದ್ಗೆ ಕರೆ ಕೊಡಲಾಗಿದೆ. ಪೀಣ್ಯಾದಲ್ಲಿ ಸಣ್ಣ ಕೈಗಾರಿಕೆ ಇವೆ. ವಿದ್ಯುತ್ ದರ ಹೆಚ್ಚಳದಿಂದ ಅವರು 4% ಹೆಚ್ಚು ತುಂಬಬೇಕಾಗಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ, ಡಿಕೆಶಿ 10 ಕೆಜಿ ಅಕ್ಕಿ ಕೊಡ್ತೇವೆ ಭರವಸೆ ನೀಡಿದ್ದರು. ಈಗಲೂ ಅವರು ಮಾತಾಡ್ತಿಲ್ಲ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸ್ತಾರೆ. ರೇಷನ್ ಅಕ್ಕಿ ಕೇಂದ್ರ ಕೊಡ್ತಿದೆ. ಅದನ್ನು ಅವರು ಮಾರುಕಟ್ಟೆಯಲ್ಲಿ ಖರೀದಿ ಮಾಡಿ ಜನರಿಗೆ ಕೊಡಬೇಕು. ಅದನ್ನು ಬಿಟ್ಟು ಆರೋಪ ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಧಾರವಾಡದಲ್ಲಿ ಮನೆಗಳ್ಳರ ಹಾವಳಿ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕಳ್ಳ-ಕಾಕರು, ಗೂಂಡಾಗಳು, ಇಸ್ಪೀಟ್ ಆಡಿಸುವವರಿಗೆ ಒಮ್ಮಿಂದೊಮ್ಮೆಲೆ ಧೈರ್ಯ ಬರುತ್ತದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಬಿಜೆಪಿ ಸರ್ಕಾರ ಇದ್ದಾಗ ಕಳ್ಳತನ ಕಡಿಮೆ ಇದ್ದವು ಎಂದು ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡರು.
ಇದನ್ನೂಓದಿ:ಸೌಹಾರ್ದಯುತವಾಗಿ ರಾಷ್ಟ್ರಪತಿ ಭೇಟಿಯಾದ ಸಿದ್ದರಾಮಯ್ಯ.. ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡುವ ಬಗ್ಗೆ ಕೇಂದ್ರಕ್ಕೆ ಸಿಎಂ ಪ್ರಸ್ತಾಪ